ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಬೆಚ್ಚಿಬಿಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಹೆತ್ತ ಮಗುವನ್ನು ಬಿಟ್ಟು ತಾಯಿಯೊಬ್ಬಳು ಪರಾರಿಯಾಗಿದ್ದಳು. ಸದ್ಯ ಮಗು ಸಾವನ್ನಪ್ಪಿದ್ದು, ಪಾಪಿ ತಾಯಿಯನ್ನ ಅರೆಸ್ಟ್ ಮಾಡಲಾಗಿದೆ.
ಹೌದು ಬೆಳಗಾವಿಯ ಜಿಲ್ಲಾಸ್ಪತ್ರೆಗೆ ಡಿಸೆಂಬರ್ 8ರಂದು ಬೈಲಹೊಂಗಲ್ ಮೂಲದ ಬೀಬಿಜಾನ್ ಎಂಬ ಮಹಿಳೆ ತುರ್ತು ಪರಿಸ್ಥಿತಿಯಲ್ಲಿ ಪ್ರಸೂತಿಗೆಂದು ದಾಖಲಾಗಿದ್ದಳು. ಮಹಿಳೆಯ ಬಳಿ ಯಾವುದೇ ಗುರುತಿನ ಚೀಟಿಯಾಗಲಿ ದಾಖಲೆಯಾಗಲಿ ಇರಲಿಲ್ಲ. ತಾನು 6 ತಿಂಗಳ ಗರ್ಭಿಣಿಯಾಗಿದ್ದು,ಕಾಲು ಜಾರಿ ಬಿದ್ದಿದ್ದೇನೆ.
ಹೊಟ್ಟೆ ನೋಯುತ್ತಿದೆ ಎಂದಾಗ ಮಾನವೀಯತೆಯ ದೃಷ್ಟಿಯಿಂದ ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಪ್ರಸೂತಿಯನ್ನು ಮಾಡಲಾಗಿತ್ತು. ಆದರೇ ಹುಟ್ಟಿದ ಮಗು ಕೇವಲ 750 ಕಿಲೋ ತೂಕವನ್ನ ಹೊಂದಿದ್ದು, ಆರೋಗ್ಯದಲ್ಲಿ ಏರುಪೇರು ಕಾಣುತ್ತಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಮಗುವನ್ನು ವೆಂಟಿಲೇಟರ್ ಮೇಲೆ ಇಡಲಾಗಿತ್ತು. ಆದರೇ ಬೀಬಿಜಾನ್ ತನ್ನ ಅತ್ತೆಯೊಂದಿಗೆ ಮಗುವನ್ನ ಬಿಟ್ಟು ಪರಾರಿಯಾಗಿದ್ದಳು. ಈ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.
ಇತ್ತ ಮಗುವಿನ ತಾಯಿ ಪರಾರಿ ಆಗುತ್ತಿದ್ದಂತೆ ಬೆಳಗಾವಿ ಜಿಲ್ಲಾಸ್ಪತ್ರೆಯ ಅಧಿಕಾರಿಗಳು ಎಪಿಎಂಸಿ ಪೊಲೀಸರಿಗೆ ದೂರು ನೀಡಿದ್ದರು. ಇಷ್ಟರಲ್ಲಿ ಇನ್ನೊಂದು ಘಟನೆ ನಡೆಯಿತು ಅದೇನೆಂದರೆ, ಚಿಕಿತ್ಸೆ ಫಲಕಾರಿಯಾಗದೆ ಮಗು ತೀರಿ ಹೋಯಿತು. ಈ ಕುರಿತು ಬೆಳಗಾವಿ ಬಿಮ್ಸ್ ನ ಆರ್ ಎಂ ಓ ಡಾಕ್ಟರ್ ಸರೋಜ್ ಇನ್ ನ್ಯೂಸ್ ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು.
ಪ್ರಕರಣದ ಜಾಡು ಹಿಡಿದು ತನಿಖೆ ಕೈಗೊಂಡ ಎಪಿಎಂಸಿ ಪೊಲೀಸರ ತಂಡ ಕೊನೆಗೂ ಬೈಲಹೊಂಗಲದ ಇಂದಿರಾ ನಗರದಲ್ಲಿ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ನವಜಾತ ಶಿಶುವನ್ನು ತೊರೆದು ಹೋಗಿದ್ದ
ಬೀಬಿಜಾನ್ ಸದ್ದಾಮ್ ಹುಸೇನ್ ಸೈಯದ್ ಎಂಬ ಮಹಿಳೆಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತನಿಖೆಯ ವೇಳೆ ಬೀಬಿಜಾನಗೆ ಈಗಾಗಲೇ ಮೂರು ಮಕ್ಕಳಿದ್ದು, ಪತಿ ಬೇರೆ ಊರಲ್ಲಿ ಕೂಲಿ ಕೆಲಸ ಮಾಡುತ್ತಾನೆ. ಅಂತಹದ್ದರಲ್ಲಿ ಇಂತಹ ಶಿಶು ಬೇಡವೆಂದು ತೊರೆದು ಹೋಗಿರುವುದು ಬೆಳಕಿಗೆ ಬಂದಿದೆ. ಈಗ ಬೀಬಿಜಾನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.