ಸಿಂಧನೂರು: ಮುಂಗಾರು ಹಂಗಾಮಿನಲ್ಲಿ ಸಾಕಷ್ಟು ಮಳೆಯಾಗಿದ್ದು ಕಾಲುವೆಯ ನೀರು ಸಹ ಯಥೇಚ್ಛವಾಗಿ ಹರಿದು ಬಂದಿರುವುದರಿಂದ ತಾಲ್ಲೂಕಿನಲ್ಲಿ ಭತ್ತದ ಬೆಳೆ ಸಮೃದ್ಧವಾಗಿ ಬೆಳೆದು ನಿಂತು ಕಾಳು ಕಟ್ಟಿದೆ. ಈ ಸಮಯದಲ್ಲಿ ಕಣೆ ನೊಣ ಮತ್ತು ಕಾಡಿಗಿ ರೋಗ ಹರಡಿ ಬೆಳೆಹಾನಿ ಉಂಟು ಮಾಡುತ್ತಿರುವುದು ರೈತರಿಗೆ ಸಂಕಟ ತಂದೊಡ್ಡಿದೆ.
ತಾಲ್ಲೂಕಿನಲ್ಲಿ 1.30 ಲಕ್ಷ ಹೆಕ್ಟೇರ್ ಜಮೀನು ಕೃಷಿಗೆ ಯೋಗ್ಯವಾಗಿದ್ದು, ಅದರಲ್ಲಿ 75 ಸಾವಿರ ಹೆಕ್ಟೇರ್ ಜಮೀನಿನಲ್ಲಿ ಭತ್ತ ಬೆಳೆಯಲಾಗಿದೆ. ಕಾಳು ಕಟ್ಟುವ ಸಮಯದಲ್ಲಿ ಕಣೆ ನೊಣ ರೋಗ ಕಾಣಿಸಿಕೊಂಡಿದ್ದರಿಂದ ಕಾಳು ಕಟ್ಟುವುದು ನಿಂತು ಹೋಗುತ್ತದೆ. ತೆನೆಯಲ್ಲಿ ಕಾಳುಗಳೇ ಇರುವುದಿಲ್ಲ.
ನಾಟಿ ಹಾಕಿ ಗೊಬ್ಬರ, ಕ್ರಿಮಿನಾಶಕ ಸಿಂಪಡಿಸಿ ಸಹಸ್ರಾರು ರೂಪಾಯಿ ಖರ್ಚು ಮಾಡಿರುವ ಬೆಳೆ ತೆನೆ ರಹಿತವಾಗಿ ನಿಂತುಕೊಳ್ಳುವುದರಿಂದ ರೈತರ ಶ್ರಮ, ಹಣ ನಷ್ಟವಾಗುವುದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ.
ಕಾಡಿಗೆ ರೋಗ ಕಾಳು ಕಟ್ಟಿದ ತೆನೆಯನ್ನು ಸಂಪೂರ್ಣ ಕಪ್ಪಾಗಿಸುವುದರಿಂದ ಭತ್ತ ನಿರುಪಯುಕ್ತವಾಗುತ್ತದೆ. ಈ ರೋಗ ಕಾಣಿಸಿಕೊಳ್ಳುತ್ತಿದ್ದಂತೆ ಸಹಾಯಕ ಕೃಷಿ ನಿರ್ದೇಶಕ ನಜೀರ್ ಅಹ್ಮದ್ ಹಾಗೂ ಕೃಷಿ ವಿಜ್ಞಾನಿಗಳು ವಿವಿಧ ಗ್ರಾಮೀಣ ರೈತರ ಜಮೀನುಗಳಿಗೆ ಖುದ್ದಾಗಿ ತೆರಳಿ ರೈತ ಜಾಗೃತಿ ಸಭೆಗಳನ್ನು ಮಾಡಿ ಕಣೆ ನೊಣ ಮತ್ತು ಕಾಡಿಗೆ ರೋಗ ನಿರ್ಮೂಲನೆಗೆ ಶಿಲೇಂದ್ರ ನಾಶಕ ಮತ್ತು ಕೀಟನಾಶಕಗಳನ್ನು ಸಿಂಪಡಿಸುವ ವಿಧಾನ ಕುರಿತು ಜಾಗೃತಿ ಮೂಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.