ಕಲಬುರಗಿ: ಕಲಬುರಗಿ ಮೂಲದ ಐಪಿಎಸ್ ಅಧಿಕಾರಿ ಅಮಿತ್ ಜವಳಗಿ ಅವರು ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತ ಸಮೀಪದ ಚಂದನ್ ನಗರದ ಪೊಲೀಸ್ ಕಮಿಷನರ್ ಹುದ್ದೆಗೇರಿದ್ದಾರೆ.
ಪಶ್ಚಿಮ ಬಂಗಾಳದ ಚಂದನ್‌ನಗರ ವ್ಯಾಪ್ತಿಯ ಠಾಣೆಗಳಲ್ಲಿ ಆಸ್ತಿಗಳ ಡಿಜಿಟಲೀಕರಣ ಮಾಡಿ ಅವುಗಳಿಗೆ ಬಾರ್ ಕೋಡ್ ಅಳವಡಿಸಿದ ಸಾಧನೆಗಾಗಿ ಅಮಿತ್ ಅವರಿಗೆ ಪ‍್ರಸಕ್ತ ವರ್ಷದ ಭಾರತ ಸರ್ಕಾರದ ಇ-ಗವರ್ನನ್ಸ್ ಇಲಾಖೆಯ ರಾಷ್ಟ್ರೀಯ ಪ್ರಶಸ್ತಿಯು ಚಿನ್ನದ ಪದಕದೊಂದಿಗೆ ಲಭಿಸಿದೆ.
ಕಲಬುರಗಿಯ ಕೇಂದ್ರೀಯ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದ ಅಮಿತ್ ಅವರು ಎಸ್‌ಬಿಆರ್ ಕಾಲೇಜಿನಲ್ಲಿ ವಿಜ್ಞಾನ ವಿಷಯದಲ್ಲಿ ಪಿಯು ಶಿಕ್ಷಣ ಪಡೆದರು. ಬೆಂಗಳೂರಿನ ಎಂ.ಎಸ್. ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿದ ಅಮಿತ್ ಅವರು, 2006ರಲ್ಲಿ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು. ಪಶ್ಚಿಮ ಬಂಗಾಳ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿ ನೇಮಕವಾದ ಅಮಿತ್ ಅವರು, ಬಂಗಾಳದ ಮೂರು ಪ್ರಮುಖ ಜಿಲ್ಲೆಗಳಾದ ಉತ್ತರ ದಿನಾಜಪುರ, ಜಲ್‌ಪೈಗುರಿ ಹಾಗೂ ಕಣಿವೆಗಳ ಜಿಲ್ಲೆ ಡಾರ್ಜಿಲಿಂಗ್‌ನ ಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.
ಅಮಿತ್ ಅವರ ತಂದೆ ಪಂಡಿತ್ ಜವಳಗಿ ಅವರು ನಗರದ ಎಂಎಸ್‌ಐ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು. ಕಲಬುರಗಿಯ ವಿಶ್ವೇಶ್ವರಯ್ಯ ಕಾಲೊನಿಯಲ್ಲಿ ಅಮಿತ್ ಅವರ ಪೋಷಕರು ವಾಸವಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ತಮ್ಮ ಅನುಭವಗಳನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಅಮಿತ್ ಜವಳಗಿ ಅವರು, ‘ಪಶ್ಚಿಮ ಬಂಗಾಳದೊಂದಿಗೆ ಬಾಂಗ್ಲಾದೇಶ ಮತ್ತು ನೇಪಾಳದ ಗಡಿ ಇರುವುದರಿಂದ ಹೆಚ್ಚು ಗಮನ ಹರಿಸಬೇಕಾಗುತ್ತದೆ. ಏಕೆಂದರೆ ಎರಡೂ ದೇಶಗಳ ನಾಗರಿಕರು ಇತ್ತ ಬರುತ್ತಿರುತ್ತಾರೆ. ಹೇಳಿಕೊಳ್ಳುವಂತಹ ಭದ್ರತಾ ಸಮಸ್ಯೆಗಳು ಆಗಿಲ್ಲ’ ಎಂದರು.
ಅಮಿತ್ ಅವರು ಕೋಲ್ಕತ್ತ ನಗರದ ಡಿಸಿಪಿಯಾಗಿ, ಡಾರ್ಜಿಲಿಂಗ್ ಡಿಐಜಿ, ಕೋಲ್ಕತ್ತ ಸಂಚಾರ ವಿಭಾಗದ ಡಿಐಜಿಯಾಗಿ ಕಾರ್ಯನಿರ್ವಹಿಸಿದ್ದಾರೆ. ರಾಜ್ಯ ಗುಪ್ತಚರ ಇಲಾಖೆಯಲ್ಲಿಯೂ ಕೆಲ ಕಾಲ ಕರ್ತವ್ಯ ನಿರ್ವಹಿಸಿದ್ದಾರೆ.
Laxmi News 24×7