ರಾಮದುರ್ಗ: ‘ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಿದೆ. ಇದರಿಂದ ಜನರಿಗೆ ಸ್ವಲ್ಪ ಪ್ರಮಾಣದ ಸಹಾಯವಾಗಿದ್ದರೂ ಪ್ರಾಣದ ಜೊತೆಗೆ ಆಟವಾಡುವ ನಕಲಿ ವೈದ್ಯರಿಗೆ ಕಡಿವಾಣ ಹಾಕಲಾಗುವುದು’ ಎಂದು ವಿಧಾನಸಭೆಯ ಮುಖ್ಯ ಸಚೇತಕ ಅಶೋಕ ಪಟ್ಟಣ ಹೇಳಿದರು.
ರಾಮದುರ್ಗದ ಸರ್ಕಾರಿ ಆಸ್ಪತ್ರೆಯಲ್ಲಿ ₹55 ಲಕ್ಷದ ವೆಚ್ಚದಲ್ಲಿ ನಿರ್ಮಿಸಿದ ಹೈಟೆಕ್ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿ, ‘ತರಬೇತಿ ಇಲ್ಲದೆ ನಕಲಿ ವೈದ್ಯರು ನೀಡುವ ಚಿಕಿತ್ಸೆ ಮತ್ತು ಔಷಧದಿಂದ ರೋಗಿಗಳಿಗೆ ತಾತ್ಕಾಲಿಕವಾಗಿ ನೋವು ಕಡಿಮೆಯಾದರೂ ಮುಂದೆ ಅದರಿಂದ ತೊಂದರೆಯಾಗುತ್ತದೆ. ತಾಲ್ಲೂಕಿನಲ್ಲಿ ನಕಲಿ ವೈದ್ಯರ ಪತ್ತೆಗೆ ಕ್ರಮಕೈಗೊಳ್ಳಬೇಕು’ ಎಂದರು.
‘ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ಯಂತ್ರಗಳನ್ನು ತ್ವರಿತವಾಗಿ ದುರಸ್ತಿ ಮಾಡಿ ಸೂಕ್ತ ತಂತ್ರಜ್ಞರನ್ನು ವಿನಿಯೋಗಿಸಲಾಗುವುದು. ತಾಲ್ಲೂಕಿನ ಶಿವಪೇಟೆಯ ಪ್ರಾಥಮಿಕ ಆರೋಗ್ಯ ಕೇಂದ್ರವು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುತ್ತಿದೆ. ಹೆಚ್ಚಿನ ವೈದ್ಯರನ್ನು ರಾಮದುರ್ಗ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು’ ಎಂದು ಹೇಳಿದರು.
Laxmi News 24×7