ಬೆಂಗಳೂರು: ವಿಜಯಪುರ ಜಿಲ್ಲೆಯಲ್ಲಿ ವಕ್ಫ್ ಮಂಡಳಿಯು ಆಸ್ತಿ ವಶಕ್ಕಾಗಿ ರೈತರಿಗೆ ನೋಟಿಸ್ ನೀಡಿರುವ ಸಂಬಂಧ ಅಲ್ಲಿಗೆ ಭೇಟಿ ನೀಡಿ ನೊಂದ ರೈತರ ಅಹವಾಲು ಆಲಿಸುವ ಬಿಜೆಪಿ ತಂಡದ ಬಗ್ಗೆ ಅದೇ ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ಸಂಸದ ಗೋವಿಂದ ಕಾರಜೋಳ ನೇತೃತ್ವದಲ್ಲಿ ರಚಿಸಿದ್ದ ತಂಡವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪುನಾರಚನೆ ಮಾಡಿದ್ದಾರೆ.
ಈಗಾಗಲೇ ಇರುವ ಸದಸ್ಯರ ಜೊತೆಗೆ ಸಂಸದ ರಮೇಶ್ ಜಿಗಜಿಣಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಜಿಲ್ಲೆಯ ಮಾಜಿ ಅಧ್ಯಕ್ಷ ಎಂ.ಬಿ. ಜಿರಲಿ ಅವರನ್ನು ಸೇರ್ಪಡೆ ಮಾಡಲಾಗಿದೆ. ಇದು ವಿಜಯೇಂದ್ರ ಟೀಂ. ನಾನು ಹಾಗೂ ಸಂಸದರು ಬಿಜೆಪಿ ತಂಡಕ್ಕೆ ಬಹಿಷ್ಕಾರ ಹಾಕಿದ್ದೇವೆ. ವಿಜಯೇಂದ್ರ ಕಾರ್ಯಕ್ರಮವೇ ನಮ್ಮನ್ನು ತುಳಿಯುವುದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನವನ್ನು ಹೊರಹಾಕಿದ್ದರು. ಇದರ ಬೆನ್ನಲ್ಲೇ ಪಟ್ಟಿ ಪರಿಷ್ಕರಣೆ ಮಾಡಲಾಗಿದೆ.
ಶಾಸಕರಾದ ಹರೀಶ್ ಪೂಂಜಾ, ಮಹೇಶ್ ಟೆಂಗಿನಕಾಯಿ, ಮೇಲ್ಮನೆ ಮಾಜಿ ಸದಸ್ಯ ಅರುಣ್ ಶಹಾಪುರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ ಅವರೂ ತಂಡದಲ್ಲಿದ್ದು, ಸಮಿತಿಯ ಎಲ್ಲ ಸದಸ್ಯರೂ ಮಂಗಳವಾರ (ಅ.29) ವಿಜಯಪುರಕ್ಕೆ ಭೇಟಿ ನೀಡಿ ರೈತರ ಅಹವಾಲು ಆಲಿಸಲಿದ್ದಾರೆ.