ಚನ್ನಪಟ್ಟಣ, ಅಕ್ಟೋಬರ್ 28: ಚನ್ನಪಟ್ಟಣ ವಿಧಾನಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಭಾನುವಾರ ಬಿರುಸಿನ ಪ್ರಚಾರ ನಡೆಸಿದ್ದಾರೆ. ಪ್ರಚಾರದ ನಡುವೆ ದಶಾವರ ಗ್ರಾಮಕ್ಕೆ ಬಂದ ನಿಖಿಲ್ ಅವರನ್ನು ಆಶೀರ್ವದಿಸಿದ ಅಜ್ಜಿಯೊಬ್ಬರು, ಹೋಗು ಮಗನೇ..
ನಿನಗೆ ಒಳ್ಳೆಯದಾಗುತ್ತದೆ. ನೀನು ಗೆದ್ದೇ ಗೆಲ್ಲುವೆ ಎಂದು ಆಶೀರ್ವದಿಸಿದರು. ಅಜ್ಜಿಯಿಂದ ಮಾತಿನಿಂದ ಭಾವುಕರಾದ ನಿಖಿಲ್ ಅವರು, ಕಣ್ಣಲ್ಲಿ ನೀರು ತುಂಬಿಕೊಂಡರು. ನಿಮ್ಮ ಆಶೀರ್ವಾದ ಇದ್ದರೆ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.
ಚನ್ನಪಟ್ಟಣ ಕ್ಷೇತ್ರದ ಪ್ರಚಾರದ ವೇಳೆ ಕಾರ್ಯಕರ್ತರು, ಮುಖಂಡರನ್ನು ಭೇಟಿಯಾದ ನಿಖಿಲ್ ಕುಮಾರಸ್ವಾಮಿ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ದ ಮುಖಂಡರ ಮನವೊಲಿಸಿದರು. ಮಾಕಳಿ ಗ್ರಾಮದಲ್ಲಿ ಮುಖಂಡರ ಮನವೊಲಿಕೆ ಮಾಡುವಲ್ಲಿ ಅವರು ಯಶಸ್ವಿಯಾದರು. ಬಳಿಕ ಎಲ್ಲಾ ಕಾರ್ಯಕರ್ತರು, ಮುಖಂಡರು ನಿಖಿಲ್ ಅವರ ಜತೆ ಪ್ರಚಾರದಲ್ಲಿ ಹೆಜ್ಜೆ ಹಾಕಿದರು.