ಬೆಂಗಳೂರು: ಜಾತಿ ಗಣತಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಕೈಗೆತ್ತಿಕೊಳ್ಳಲು ಸರಕಾರ ಉದ್ದೇಶಿಸಿರುವ ಬೆನ್ನಲ್ಲೇ ರಾಜ್ಯದ ಪ್ರಬಲ ಸಮುದಾಯ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ, ವರದಿಯೇ ಅವೈಜ್ಞಾನಿಕ ಮತ್ತು ಅಸಂವಿಧಾನಿಕವಾಗಿದ್ದು, ಹೊಸದಾಗಿ ಸಮೀಕ್ಷೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಲು ನಿರ್ಣಯ ಕೈಗೊಂಡಿದೆ.
ಅಷ್ಟೇ ಅಲ್ಲ, ಇದಕ್ಕೆ ಪರ್ಯಾಯವಾಗಿ ಶೀಘ್ರ ತನ್ನ ಸಮುದಾಯದ ಸಮೀಕ್ಷೆ ನಡೆಸಲು ನಿರ್ಧರಿಸಿದೆ.
ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಈ ಮಹತ್ವದ ಸಭೆಯಲ್ಲಿ ಸರಕಾರದ ಭಾಗವಾಗಿರುವ ಹಿರಿಯ ಸಚಿವರೂ ಸೇರಿದಂತೆ ವೀರಶೈವ ಲಿಂಗಾಯತ ಸಮುದಾಯದ ಶಾಸಕರು, ಸಂಸದರು, ವಿಧಾನ ಪರಿಷತ್ತಿನ ಸದಸ್ಯರು, ಪಂಚಮಸಾಲಿ 2ಎ ಮೀಸಲಾತಿ ಹೋರಾಟದ ಮುಂಚೂಣಿ ನಾಯಕರೆಲ್ಲರೂ ಭಾಗವಹಿಸಿದ್ದರು. ಅಲ್ಲಿ ಸರಕಾರ ಕೈಗೆತ್ತಿಕೊಳ್ಳಲಿರುವ ಜಾತಿ ಗಣತಿ ವರದಿಗೆ ಒಕ್ಕೊರಲಿನಿಂದ ವಿರೋಧ ವ್ಯಕ್ತವಾಗಿದ್ದು ಹೊಸದಾಗಿ ವೈಜ್ಞಾನಿಕವಾಗಿ ಜಾತಿ ಸಮೀಕ್ಷೆ ನಡೆಸಲು ಸರಕಾರವನ್ನು ಒತ್ತಾಯಿಸಲಾಯಿತು.