ಬೆಳಗಾವಿ: ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಕನ್ನಡ ನಾಡು-ನುಡಿ ಹೋರಾಟಗಾರರನ್ನು ಜಿಲ್ಲಾಡಳಿತದ ವತಿಯಿಂದ ಗುರುತಿಸಿ ಸನ್ಮಾನಿಸಲು ತೀರ್ಮಾನಿಸಲಾಗಿದ್ದು, ಬೆಳಗಾವಿ ಜಿಲ್ಲೆಯ ಅರ್ಹ ಕನ್ನಡಪರ ಹೋರಾಟಗಾರರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಅಧ್ಯಕ್ಷರು, ಕನ್ನಡ ಹೋರಾಟಗಾರರ ಸನ್ಮಾನ ಆಯ್ಕೆ ಸಮಿತಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.
ಕನ್ನಡ ನಾಡು ನುಡಿಗಾಗಿ ಹೋರಾಡಿದ 40 ವರ್ಷ ಮೇಲ್ಪಟ್ಟವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಕನಿಷ್ಠ 5 ವರ್ಷಗಳ ಕಾಲ ಕನ್ನಡಪರ ಹೋರಾಟಗಳ ನೇತೃತ್ವ ವಹಿಸಿದವರು ಅಥವಾ ಮುಂಚೂಣಿಯಲ್ಲಿದ್ದವರು ಮತ್ತು ಯಾವುದೇ ವೈಯಕ್ತಿಕ ಕ್ರಿಮಿನಲ್ ಮೊಕದ್ದಮೆಗಳು ಹೊಂದಿರದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಸಕ್ತರು, ತಮ್ಮ ಸ್ವ-ವಿವರ ಮಾಹಿತಿ, ಛಾಯಾಚಿತ್ರಗಳು, ಪತ್ರಿಕಾ ವರದಿ ಇನ್ನಿತರ ಲಭ್ಯ ದಾಖಲೆಗಳ ಸಮೇತ ಅಕ್ಟೋಬರ್ 26 ರೊಳಗಾಗಿ “ಉಪ ವಿಭಾಗಾಧಿಕಾರಿಗಳ ಕಚೇರಿ, ನ್ಯಾಯಾಲಯ ಆವರಣ, ಬೆಳಗಾವಿ” ಇಲ್ಲಿ ಸಲ್ಲಿಸಬಹುದು ಎಂದು ಅಧ್ಯಕ್ಷರು, ಕನ್ನಡ ಹೊರಾಟಗಾರರ ಸನ್ಮಾನ ಆಯ್ಕೆ ಸಮಿತಿ ಹಾಗೂ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅವರು ತಿಳಿಸಿದ್ದಾರೆ.