ಆನೇಕಲ್ : ತಾಲ್ಲೂಕಿನ ವಿವಿಧೆಡೆ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನೀರಿನ ಹರಿವು ಹೆಚ್ಚಾಗಿ ಬೆಂಗಳೂರಿನ ಐಟಿ ಹಬ್ ಎಲೆಕ್ಟ್ರಾನಿಕ್‌ಸಿಟಿ ಮತ್ತು ವೀರಸಂದ್ರ ರಸ್ತೆಗಳು ಕೆರೆಯಂತಾಗಿವೆ.
ರಸ್ತೆಗಳು ಸಂಪೂರ್ಣ ಜಲಾವೃತ್ತಗೊಂಡಿದೆ. ಇದರಿಂದಾಗಿ ದ್ವಿಚಕ್ರ ವಾಹನಗಳ ಸವಾರರು ಪರದಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಸೋಮವಾರ ಸಂಜೆ ಪ್ರಾರಂಭವಾದ ಮಳೆ ಮಂಗಳವಾರ ಬೆಳಗ್ಗೆ ಸ್ವಲ್ಪ ಬಿಡುವು ನೀಡಿತ್ತು. ಮಂಗಳವಾರ ಮಧ್ಯಾಹ್ನ 12ಕ್ಕೆ ಪ್ರಾರಂಭವಾದ ಮಳೆ ಸಂಜೆ 7ಗಂಟೆವರೆಗೂ ನಿರಂತರವಾಗಿ ಸುರಿಯುತ್ತಲೇ ಇತ್ತು. ಆನೇಕಲ್-ಚಂದಾಪುರ ರಸ್ತೆಯ ವಿಜಯ ನರ್ಸಿಂಗ್ ಹೋಂ ಮುಂಭಾಗದಲ್ಲಿ ಮಳೆಯಿಂದಾಗಿ ರಸ್ತೆಯಲ್ಲಿ ನೀರು ನಿಂತಿತ್ತು.
ಮಂಗಳವಾರ ಸುರಿದ ಮಳೆಯಿಂದಾಗಿ ಉದ್ಯೋಗಿಗಳು, ವಿದ್ಯಾರ್ಥಿಗಳು ಕಷ್ಟ ಪರದಾಡಿದರು. ಮಳೆಯ ನಡುವೆಯೇ ಕಾರ್ಮಿಕರು ರೈನ್ ಕೋಟ್ ಧರಿಸಿ ತಮ್ಮ ಕಾರ್ಯ ಮುಗಿಸಿ ಮನೆಗಳತ್ತ ಹೊರಡುತ್ತಿದ್ದ ದೃಶ್ಯ ಕಂಡು ಬಂದಿತು.
ಸದಾ ವಾಹನಗಳಿಂದ ಗಿಜಿಗುಟ್ಟುವ ರಾಷ್ಟ್ರೀಯ ಹೆದ್ದಾರಿ 44 ಮಳೆ ಆರ್ಭಟದಿಂದಾಗಿ ವಾಹನಗಳ ಸಂಖ್ಯೆ ಇಳಿಮುಖವಾಗಿತ್ತು. ಚಂದಾಪುರ, ಅತ್ತಿಬೆಲೆಯಲ್ಲಿ ಭಾರಿ ಮಳೆಯಿಂದಾಗಿ ರಸ್ತೆ ಬದಿಗಳಲ್ಲಿಯೇ ದ್ವಿಚಕ್ರ ವಾಹನಗಳನ್ನು ನಿಲ್ಲಿಸಿ ಮಳೆ ನಿಲ್ಲುವಿಕೆಗಾಗಿ ಕಾಯುತ್ತಿದ್ದ ದೃಶ್ಯವೂ ಸಾಮಾನ್ಯವಾಗಿತ್ತು.