ಬೆಳಗಾವಿ: ಇಡಿ ದಾಳಿಗೂ ಸಿಎಂ ಸಿದ್ದರಾಮಯ್ಯ ಅವರಿಗೂ ಸಂಬಂಧವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿಯಲ್ಲಿ ಶನಿವಾರ (ಅ.19) ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ಮೇಲೆ ಇಡಿ ದಾಳಿ ಮಾಡಿಲ್ಲ. ಮುಡಾ ಮೇಲೆ ಇಡಿ ದಾಳಿಯಾಗಿದೆ.
ಮುಡಾ ಮೇಲಿನ ತನಿಖೆ ಆಗಬೇಕು ಎನ್ನುವದು ನಮ್ಮ ವಾದವಿದೆ. ಇಡಿ ಅವರು ವಿಚಾರಣೆ ಮಾಡುತ್ತಿದ್ದಾರೆ. ಅವರಿಗೆ ಏನು ಬೇಕೋ ಅದನ್ನು ತನಿಖೆ ಮಾಡುತ್ತಾರೆ. ಎಲ್ಲಾ ದಾಖಲೆಗಳು ಸರಕಾರದಲ್ಲಿ ಇರುತ್ತವೆ. ಯಾವ ದಾಖಲೆಗಳು ಎಲ್ಲಿ ಹೋಗಲು ಅವಕಾಶವಿಲ್ಲ ಎಂದರು.
ಸಚಿವ ಭೈರತಿ ಸುರೇಶ ಅವರು ಕಡತಗಳನ್ನು ನಾಶ ಮಾಡಿದ್ದಾರೆ ಎನ್ನುವ ಎಚ್ ಡಿ ಕುಮಾರಸ್ವಾಮಿ ಆರೋಪ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಅದೂ ಸಾಬೀತಾಗಬೇಕು. ಅದು ಇಡಿ ತನಿಖೆಯಿಂದ ಗೊತ್ತಾಗುತ್ತದೆ. ಇಡಿ ತನಿಖೆವರೆಗೂ ಕಾಯ್ದು ನೋಡೋಣ ಯಾವುದೇ ಅವಸರ ಇಲ್ಲ ಎಂದು ಜಾರಕಿಹೊಳಿ ಹೇಳಿದರು.