ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಇನ್ನೂ ಇತ್ಯರ್ಥವಾಗದೆ ಇರುವ ಹಿನ್ನೆಲೆಯಲ್ಲಿ 5, 8, 9 ಹಾಗೂ 11ನೇ ತರಗತಿಗೆ ಈ ವರ್ಷ ಬೋರ್ಡ್ ಪರೀಕ್ಷೆ ನಡೆಸುವುದಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬೋರ್ಡ್ ಪರೀಕ್ಷೆ ಬದಲು ಸಂಕಲಾತ್ಮಕ ಮೌಲ್ಯಮಾಪನ (ಎಸ್‌ಎ-2)ವನ್ನು 5, 8 ಹಾಗೂ 9ನೇ ತರಗತಿ ಮಾಡ ಲಾಗುವುದು.
11ನೇ ತರಗತಿಗೆ ವಾರ್ಷಿಕ ಪರೀಕ್ಷೆ ನಡೆಸಲಾಗುವುದು ಎಂದು ತಿಳಿಸಿದರು.
ಶಿಕ್ಷ ಕೋಪೈಲಟ್ ಆಯಪ್
ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಹೆಚ್ಚಿಸುವ ಉದ್ದೇಶದಿಂದ “ಶಿಕ್ಷ ಕೋಪೈಲಟ್’ ಆಯಪ್ ರಚಿಸಲಾಗಿದ್ದು, ಶಿಕ್ಷಕರಿಗೆ ಅಗತ್ಯವಾಗಿರುವ ಪಠ್ಯಕ್ರಮ, ಭಾಷೆ, ಸಂದರ್ಭಕ್ಕೆ ಅನುಸಾರವಾಗಿ ಸಮಗ್ರ ಬೋಧನಾ ಸಂಪನ್ಮೂಲ, ಕಲಿಕಾ ಅನುಭವ ಕಟ್ಟಿಕೊಡುವುದಕ್ಕೆ ಇದರಿಂದ ಅನುಕೂಲ ವಾಗುತ್ತದೆ ಎಂದರು.
ಶಿಕ್ಷಣ ಫೌಂಡೇಶನ್ ಮತ್ತು ಮೈಕ್ರೊಸಾಫ್ಟ್ ರಿಸರ್ಚ್ ಇಂಡಿಯಾದ ಸಹಯೋಗದಲ್ಲಿ “ಶಿಕ್ಷ ಕೋಪೈಲಟ್’ನ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪತ್ರ ಬರೆದು ಎಐ ತಂತ್ರಜ್ಞಾನವನ್ನು ಶಾಲಾ ಶಿಕ್ಷಣದಲ್ಲಿ ಅಳವಡಿಸುವ ಸಾಧ್ಯತೆಗಳನ್ನು ಪರಿಶೀಲಿಸಿ ಎಂದು ಸೂಚಿಸಿದ್ದರು. ಅವರ ಮಾರ್ಗದರ್ಶನದಂತೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಆಶಯದಂತೆ ಶಿಕ್ಷಣ ಇಲಾಖೆಯಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಂಡು ಮಕ್ಕಳು, ಶಿಕ್ಷಕರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ 750 ಶಾಲೆಗಳ ಒಂದು ಸಾವಿರ ಶಿಕ್ಷಕರಿಗೆ ಪ್ರಾಯೋಗಿಕವಾಗಿ ಒದಗಿಸ ಲಾಗುತ್ತಿದೆ. ಇದು ಯಶಸ್ವಿಯಾದರೆ ಒಂದು ಲಕ್ಷ ಶಿಕ್ಷಕರಿಗೆ ಸೌಲಭ್ಯ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಪ್ರಾರಂಭಿಕವಾಗಿ ವಿಜ್ಞಾನ, ಸಮಾಜ ವಿಜ್ಞಾನ ಸೇರಿದಂತೆ ನಾಲ್ಕು ಭಾಷೆಗಳ ಬೋಧನಾ ಸಂಪನ್ಮೂಲಗಳನ್ನು ಈ ಆಯಪ್ ಒದಗಿಸಲಿದೆ ಎಂದರು.