ಹಾವೇರಿ: ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸುತ್ತಿರುವ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಮಾಹಿತಿ ಹಾಗೂ ಆಯವ್ಯಯ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲೆಯಲ್ಲಿ ರಥ ಯಾತ್ರೆ ರೂಪಿಸಲಾಗಿದೆ.
ನಗರದ ಜಿಲ್ಲಾ ಪಂಚಾಯಿತಿ ಆವರಣದಲ್ಲಿ ಸೋಮವಾರ ಜರುಗಿದ ಕಾರ್ಯಕ್ರಮದಲ್ಲಿ ‘ನರೇಗಾ ಜಾಗೃತಿ ರಥ’ಕ್ಕೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ್ ಶ್ರೀಧರ್ ಚಾಲನೆ ನೀಡಿ, ಜಾಗೃತಿಯ ಕರಪತ್ರಗಳನ್ನು ಬಿಡುಗಡೆಗೊಳಿಸಿದರು.

ಅಕ್ಷಯ್ ಶ್ರೀಧರ್ ಮಾತನಾಡಿ, ‘ನರೇಗಾ ಯೋಜನೆಯಡಿ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲಾಗುತ್ತಿದೆ. ಹೀಗಾಗಿ, ಒಂದು ತಿಂಗಳ ಕಾಲ ಎಲ್ಲ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ’ ಹೆಸರಿನಲ್ಲಿ ಅಭಿಯಾನ ಆರಂಭಿಸಲಾಗಿದೆ’ ಎಂದರು.
‘ರೈತರು ತಮಗೆ ಬೇಕಾದ ಕಾಮಗಾರಿಗಳನ್ನು ಅನುಷ್ಠಾನ ಮಾಡಿಕೊಳ್ಳಲು ಮೊಬೈಲ್ ಮತ್ತು ಇಲಾಖೆಯ ಜಾಲತಾಣಗಳಲ್ಲಿ ಅನುವು ಮಾಡಲಾಗಿದೆ. ಈ ಸೌಲಭ್ಯದಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ, ಜಿ.ಪಂ. ಅಧಿಕಾರಿಗಳಾದ ಕುಮಾರ ಮಣ್ಣವಡ್ಡರ, ಜಿಲ್ಲಾ ಬ್ಯಾಂಕ್ ವ್ಯವಸ್ಥಾಪಕ ಅಣ್ಣಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ ಇದ್ದರು.
Laxmi News 24×7