ಬೆಳಗಾವಿ: ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ನಮ್ಮ ಸಮುದಾಯಕ್ಕೆ ‘2ಎ’ ಮೀಸಲಾತಿ ನೀಡುವ ವಿಚಾರವಾಗಿ ಯಾವ ಪ್ರಗತಿಯಾಗಲಿಲ್ಲ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗಾಗಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮುದಾಯದ ಎಲ್ಲ ಪದಾಧಿಕಾರಿಗಳು ಅ.18ರಂದು ಬೆಂಗಳೂರಿನಲ್ಲಿ ಧರಣಿ ನಡೆಸಲಿದ್ದೇವೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಮುಖ್ಯಮಂತ್ರಿ ಭೇಟಿಗಾಗಿ ದಿನಾಂಕ ನಿಗದಿಪಡಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ನಮ್ಮ ಮೀಸಲಾತಿ ಹೋರಾಟ ಬಳಸಿಕೊಂಡು ಆಯ್ಕೆಯಾದ ನಮ್ಮ ಸಮುದಾಯದ ಕಾಂಗ್ರೆಸ್‌ನ ಶಾಸಕರು ಬೇಡಿಕೆ ಈಡೇರಿಸಲು ಮುಖ್ಯಮಂತ್ರಿ ಮುಂದೆ ಏಕೆ ಧ್ವನಿ ಎತ್ತುತ್ತಿಲ್ಲವೆಂದು ಗೊತ್ತಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಮೀಸಲಾತಿ ಪರವಾಗಿ ಧ್ವನಿ ಎತ್ತದ ನಿಮ್ಮ ಸಮುದಾಯದ ಜನಪ್ರತಿನಿಧಿಗಳ ನಡೆ ಖಂಡಿಸುತ್ತೀರಾ’ ಎಂಬ ಪ್ರಶ್ನೆಗೆ, ಶ್ರೀಗಳು ಉತ್ತರಿಸಲಿಲ್ಲ.
‘ನಮ್ಮ ಬೇಡಿಕೆ ಈಡೇರಿಕೆಗಾಗಿ ಕಳೆದ ತಿಂಗಳು ವಕೀಲರ ಸಮಾವೇಶ ನಡೆಸಿ, ಸರ್ಕಾರಕ್ಕೆ ಪ್ರತಿಭಟನೆಯ ಎಚ್ಚರಿಕೆ ಕೊಟ್ಟಿದ್ದೆವು. ಆಗ ಸಿದ್ದರಾಮಯ್ಯ ಮಾತನಾಡಿ, ಅ.15ರಂದು ಸಮುದಾಯದೊಂದಿಗೆ ಸಭೆ ನಡೆಸಲು ದಿನಾಂಕ ನಿಗದಿಪಡಿಸುವುದಾಗಿ ತಿಳಿಸಿದ್ದರು. ಆದರೆ, ಮುಖ್ಯಮಂತ್ರಿ ಈಗ ನವದೆಹಲಿಗೆ ಹೋಗುತ್ತಿದ್ದಾರೆ. ಸಭೆ ಮುಂದಿನ ದಿನಾಂಕ ತಿಳಿಸಲಾಗುವುದು ಎಂದು ಕಳೆದ ವಾರವಷ್ಟೇ ನಮಗೆ ಮಾಹಿತಿ ಸಿಕ್ಕಿದೆ’ ಎಂದು ಸ್ವಾಮೀಜಿ ಹೇಳಿದರು.