ಮುಂಬೈ: ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಅವರ ಹತ್ಯೆಯ ಕುರಿತು ಪೊಲೀಸರು ವಿವಿಧ ಕೋನಗಳಲ್ಲಿ ತನಿಖೆಯನ್ನು ಪ್ರಾರಂಭಿಸಿದ್ದಾರೆ,ಸುಫಾರಿ ಹತ್ಯೆ, ಉದ್ಯಮ ವೈಷಮ್ಯ ಅಥವಾ ಕೊಳೆಗೇರಿ ಪುನರ್ವಸತಿ ಯೋಜನೆಗೆ ಸಂಬಂಧಿಸಿದಂತೆ ಬೆದರಿಕೆಯೇ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಮುಂಬೈನಲ್ಲಿ ನಿನ್ನೆ ಶನಿವಾರ ರಾತ್ರಿ ಮೂವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಎನ್‌ಸಿಪಿ ನಾಯಕ ಸಿದ್ದಿಕ್ (66ವ) ಅವರ ಮೃತದೇಹವನ್ನು ಲೀಲಾವತಿ ಆಸ್ಪತ್ರೆಯಿಂದ ಇಂದು ಭಾನುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಕೂಪರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸ್ಥಳಾಂತರಿಸಲಾಗಿದೆ.
ಈ ಆಘಾತಕಾರಿ ಘಟನೆಯು ಮುಂದಿನ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಪ್ರತಿಪಕ್ಷಗಳಿಗೆ ಅಸ್ತ್ರ ಸಿಕ್ಕಂತಾಗಿದೆ.
ಮುಂಬೈನ ಬಾಂದ್ರಾ ಪ್ರದೇಶದ ಖೇರ್ ನಗರದಲ್ಲಿ ಬಾಬಾ ಸಿದ್ಧಿಕ್ ಅವರ ಪುತ್ರ ಶಾಸಕ ಜೀಶನ್ ಸಿದ್ದಿಕ್ ಅವರ ಕಚೇರಿಯ ಹೊರಭಾಗದಲ್ಲಿ ಮೂವರು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು ಬಂದು ಗುಂಡು ಹಾರಿಸಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದ ಸಿದ್ದಿಕಿ ಅವರನ್ನು ಕಳೆದ ರಾತ್ರಿ 9 ಗಂಟೆ ಸುಮಾರಿಗೆ ಲೀಲಾವತಿ ಆಸ್ಪತ್ರೆಯ ತುರ್ತು ವೈದ್ಯಕೀಯ ಸೇವೆಗಳಿಗೆ ಸ್ಥಳಾಂತರಿಸಲಾಯಿತು.
ಅರ್ಧ ಗಂಟೆಗೂ ಹೆಚ್ಚು ಕಾಲ ಸ್ಪಂದಿಸದ ಸ್ಥಿತಿಯಲ್ಲಿ ಸಿದ್ದಿಕಿಯಿದ್ದರು. ಆಸ್ಪತ್ರೆಗೆ ಕರೆತಂದಾಗ ನಾಡಿಮಿಡಿತವಿಲ್ಲ, ಹೃದಯ ಚಟುವಟಿಕೆಯಿಲ್ಲ, ರಕ್ತದೊತ್ತಡವಿಲ್ಲ, ಎದೆ ಮೇಲೆ ಗುಂಡಿನ ಗಾಯವಾಗಿತ್ತು ಎಂದು ವೈದ್ಯರು ತಿಳಿಸಿದರು. ನಂತರ ಅವರನ್ನು ಐಸಿಯುಗೆ ಸ್ಥಳಾಂತರಿಸಲಾಯಿತು, ಅಲ್ಲಿ ಬದುಕುಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ ಸಾಧ್ಯವಾಗಲಿಲ್ಲ. ಕೊನೆಗೆ ರಾತ್ರಿ 11:27 ಕ್ಕೆ ನಿಧನರಾದರು.
Laxmi News 24×7