ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ದೂರಿಗೆ ಸಂಬಂಧಿಸಿ ಅಗತ್ಯ ದಾಖಲೆಗಳನ್ನು ನೀಡುವಂತೆ ಜಾರಿ ನಿರ್ದೇಶನಾಲಯವು ಇಲ್ಲಿನ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ ಎನ್ನಲಾಗಿದೆ.
‘ಇ.ಡಿ. ಬೆಂಗಳೂರು ಕಚೇರಿಯಿಂದ ಮುಡಾ ಕಚೇರಿಗೆ ಪತ್ರ ರವಾನೆಯಾಗಿದ್ದು, ಲೋಕಾಯುಕ್ತದಲ್ಲಿ ಸಿದ್ದರಾಮಯ್ಯ ಸೇರಿದಂತೆ ನಾಲ್ವರು ಆರೋಪಿಗಳ ವಿರುದ್ಧ ದಾಖಲಾದ ಎಫ್‌ಐರ್‌ಗೆ ಸಂಬಂಧಿಸಿ ಎಲ್ಲ ದಾಖಲೆಗಳ ದೃಢೀಕೃತ ಪ್ರತಿಗಳನ್ನು ಒದಗಿಸುವಂತೆ ಕೇಳಿದೆ’ ಎಂದು ಮೂಲಗಳು ತಿಳಿಸಿವೆ.
ಆದರೆ ಮುಡಾ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ.
ಮುಡಾ ವ್ಯಾಪ್ತಿಯಲ್ಲಿ ‘ಸೆಟ್ಲ್‌ಮೆಂಟ್ ಡೀಡ್’ ಹೆಸರಿನಲ್ಲಿ ನಡೆದಿರುವ ನಿವೇಶನಗಳ ಹಂಚಿಕೆ ಮತ್ತು ನೋಂದಣಿ ಬಗ್ಗೆಯೂ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಕೆಯಾಗಿದ್ದು, ಈ ಪ್ರಕರಣವನ್ನೂ ಇ.ಡಿ. ಅಧಿಕಾರಿಗಳು ಪ್ರತ್ಯೇಕವಾಗಿ ಪರಿಶೀಲಿಸುವ ಸಾಧ್ಯತೆ ಇದೆ.