ಸಿ.ಎಂ ಕುರ್ಚಿಗೆ ಯತ್ನ ನಡೆಸಿದ್ದರೆ ತಪ್ಪೇನಿಲ್ಲ: ಸಚಿವ ಕೃಷ್ಣ ಬೈರೇಗೌಡ
ಕಿತ್ತೂರು: ‘ಕಾಂಗ್ರೆಸ್‌ನಲ್ಲಿ ಬೇರೆ ಯಾರಾದರೂ ಮುಖ್ಯಮಂತ್ರಿ ಆಗುವ ಪ್ರಯತ್ನ ನಡೆಸಿದ್ದರೆ ನಡೆಸಲಿ. ಆದರೆ, ಎಲ್ಲ ಶಾಸಕರು ಹಾಗೂ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಅವರ ಜತೆಗಿದ್ದೇವೆ. ಪಕ್ಷದ ವೇದಿಕೆಯಲ್ಲಿ ಮುಖ್ಯಮಂತ್ರಿ ಬದಲಾವಣೆಯ ಯಾವುದೇ ಚರ್ಚೆ ಆಗಿಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
‘ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ.ವೇಣುಗೋಪಾಲ ಅವರೆಲ್ಲ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದಾರೆ. ಹಾಗಾಗಿ, ನಾಯಕರನ್ನು ಭೇಟಿ ಮಾಡಿ ಬರುವ ಸಚಿವರ ಬಗ್ಗೆ ತಪ್ಪು ಕಲ್ಪನೆ ಬೇಡ. ಒಂದುವೇಳೆ ಅವರು ಮುಖ್ಯಮಂತ್ರಿ ಆಗುವ ಉದ್ದೇಶದಿಂದಲೇ ಭೇಟಿ ನೀಡಿದ್ದರೂ ಅದರಲ್ಲಿ ತಪ್ಪೇನೂ ಇಲ್ಲ. ಅವರವರ ಇಷ್ಟ’ ಎಂದು ಪಟ್ಟಣದಲ್ಲಿ ಮಂಗಳವಾರ ಮಾಧ್ಯಮದವರಿಗೆ ತಿಳಿಸಿದರು.
‘ನಾನು ಒಳ್ಳೆಯ ಕೆಲಸ ಮಾಡುತ್ತೇನೆ ಎಂಬ ಕಾರಣಕ್ಕೆ ಜನ ಆರು ಬಾರಿ ಗೆಲ್ಲಿಸಿದ್ದಾರೆ. ಮೂರು ಬಾರಿ ಸಚಿವನಾಗಿ ವಿವಿಧ ಖಾತೆ ನಿರ್ವಹಿಸಿದ್ದೇನೆ. ಈಗಲೂ ನನಗೆ ಕೈತುಂಬ ಕೆಲಸವಿದೆ. 24 ಗಂಟೆ ಮಾತ್ರವಲ್ಲ; ದಿನಕ್ಕೆ 48 ಗಂಟೆ ಸಿಕ್ಕರೂ ಸಾಲುವುದಿಲ್ಲ. ಒಳ್ಳೆಯ ಕೆಲಸ ಮಾಡಿದ ಮಾತ್ರಕ್ಕೆ ನಾನೂ ಮುಖ್ಯಮಂತ್ರಿ ಕುರ್ಚಿ ಗಿಟ್ಟಿಸಿಕೊಳ್ಳಲು ಹವಣಿಸುತ್ತಿದ್ದೇನೆ ಎಂಬುದು ಸರಿಯಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
Laxmi News 24×7