ಬೆಳಗಾವಿ: ಗಣೇಶೋತ್ಸವ ಮುಗಿದ ಬೆನ್ನಲ್ಲೆ, ನವರಾತ್ರಿ ಸಂಭ್ರಮದತ್ತ ಕುಂದಾನಗರಿ ಹೊರಳಿದೆ. ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿರುವ ವಿವಿಧ ಬಡಾವಣೆಗಳಲ್ಲಿ ಪ್ರತಿದಿನ ಸಂಜೆ ನಡೆಯುತ್ತಿರುವ ದಾಂಡಿಯಾ ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಕಣ್ಮನ ಸೆಳೆಯುತ್ತಿವೆ.
ಪರಿವರ್ತನ ಪರಿವಾರದ ನೇತೃತ್ವದಲ್ಲಿ ಇಲ್ಲಿನ ರಾಣಿ ಚನ್ನಮ್ಮ ನಗರದಲ್ಲಿ ಮತ್ತು ಸುರೇಶ ಯಾದವ ಫೌಂಡೇಷನ್ ನೇತೃತ್ವದಲ್ಲಿ ರಾಮತೀರ್ಥ ನಗರದಲ್ಲಿ ದಾಂಡಿಯಾ ಉತ್ಸವ ಆಯೋಜಿಸಲಾಗಿದೆ. ಇದರೊಂದಿಗೆ ಸದಾಶಿವ ನಗರ, ಟಿಳಕವಾಡಿಯ ಮಿಲೇನಿಯಂ ಉದ್ಯಾನ, ಕೋಟೆ ಕೆರೆ ಬಳಿ ಪ್ರೆಸಿಡೆನ್ಸಿಯಲ್ ಕ್ಲಬ್, ಶಗುನ್ ಗಾರ್ಡನ್ ಮತ್ತಿತರ ಕಡೆ ದಾಂಡಿಯಾ ನೃತ್ಯ ನೆರವೇರುತ್ತಿವೆ.
ಇವುಗಳಲ್ಲಿ ಪಾಲ್ಗೊಳ್ಳುತ್ತಿರುವ ನೂರಾರು ಮಹಿಳೆಯರು, ಯುವತಿಯರು ಮತ್ತು ಮಕ್ಕಳು ಸಂಭ್ರಮದಲ್ಲಿ ಮಿಂದೇಳುತ್ತಿದ್ದಾರೆ. ದಾಂಡಿಯಾ ನೃತ್ಯದ ಸೊಬಗು ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯಲ್ಲಿ ಜನರೂ ಸೇರುತ್ತಿದ್ದಾರೆ.
‘ಸಾಂಸ್ಕೃತಿಕ ಕಾರ್ಯಕ್ರಮದತ್ತ ಮಹಿಳೆಯರು, ಯುವತಿಯರನ್ನು ಸೆಳೆಯುವ ದೃಷ್ಟಿಯಿಂದ ರಾಮತೀರ್ಥ ನಗರದಲ್ಲಿ ಸತತ ನಾಲ್ಕನೇ ವರ್ಷ ದಾಂಡಿಯಾ ಉತ್ಸವ ಆಯೋಜಿಸಿದ್ದೇವೆ. ಪ್ರತಿದಿನ 350ಕ್ಕೂ ಅಧಿಕ ಮಹಿಳೆಯರು ಪಾಲ್ಗೊಳ್ಳುತ್ತಾರೆ. ಗೆದ್ದವರಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುತ್ತಿದ್ದೇವೆ’ ಎಂದು ಸಾಮಾಜಿಕ ಕಾರ್ಯಕರ್ತ ಸುರೇಶ ಯಾದವ ಹೇಳಿದರು.