ನವದೆಹಲಿ: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಪ್ರಸಕ್ತ ಆರ್ಥಿಕ ವರ್ಷದಲ್ಲಿ (2024-25) 10 ಸಾವಿರ ಉದ್ಯೋಗಿಗಳ ನೇಮಕಕ್ಕೆ ನಿರ್ಧರಿಸಿದೆ. ತನ್ನ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ಸೇವೆಯನ್ನು ಉತ್ತಮ ಪಡಿಸುವುದಕ್ಕಾಗಿ ಈ ನೇಮಕಾತಿಗೆ ಮುಂದಾಗಿದೆ.
ಡೇಟಾ ಸೈಂಟಿಸ್ಟ್, ಡೇಟಾ ಆರ್ಕಿಟೆಕ್ಟ್. ನೆಟ್ವರ್ಕ್ ಆಪರೇಟರ್ ಸೇರಿ ತಂತ್ರಜ್ಞಾನ ವಿಭಾಗದ ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತದೆ.
‘ಸಾಮಾನ್ಯ ಬ್ಯಾಂಕಿಂಗ್ ಮತ್ತು ತಂತ್ರಜ್ಞಾನ ವಿಭಾಗದ ಕಾರ್ಯಪಡೆಯ ಬಲವರ್ಧನೆಗೆ ನಿರ್ಧರಿಸಿದ್ದೇವೆ. ಇತ್ತೀಚೆಗೆ 1,500 ತಾಂತ್ರಿಕ ಉದ್ಯೋಗಿಗಳ ನೇಮಕಕ್ಕೆ ಪ್ರಕಟಣೆ ಹೊರಡಿಸಲಾಗಿದೆ. ಪರಿಣತ ಹಾಗೂ ಸಾಮಾನ್ಯ ಸೇವಾ ವಿಭಾಗದಲ್ಲಿ ಹೊಸದಾಗಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು’ ಎಂದು ಎಸ್ಬಿಐ ಅಧ್ಯಕ್ಷ ಸಿ.ಎಎಸ್.ಸೆಟ್ಟಿ ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಪ್ರಸಕ್ತ ವರ್ಷದ ಮಾರ್ಚ್ ಅಂತ್ಯಕ್ಕೆ ಎಸ್ಬಿಐನಲ್ಲಿ 2.32 ಲಕ್ಷ ಉದ್ಯೋಗಿಗಳು ಇದ್ದಾರೆ. ಈ ಪೈಕಿ 1.10 ಲಕ್ಷ ಸಿಬ್ಬಂದಿ ಗ್ರಾಹಕರಿಗೆ ಹಣಕಾಸು ಸೇವೆ ಒದಗಿಸುವ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.