ತುಮಕೂರು: ಒಂದು ಕಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಹಗರಣದ ಕುಣಿಕೆ ಬಿಗಿಯಾಗುತ್ತಿದ್ದಂತೆ ಇನ್ನೊಂದು ಕಡೆ ಕಾಂಗ್ರೆಸ್ ಸರಕಾರದಲ್ಲಿ ಬಿರುಸಿನ ಚಟುವಟಿಕೆ ನಡೆಯುತ್ತಿದೆ. ಕಾಂಗ್ರೆಸ್‌ನ ದಲಿತ ನಾಯಕರು ಮೇಲಿಂದ ಮೇಲೆ ಭೇಟಿ ಯಾಗುತ್ತಿರುವುದು ಕುತೂಹಲಕ್ಕೆ ಕಾರಣ ವಾಗಿದೆ.
ಇತ್ತೀಚೆಗಷ್ಟೇ ಗೃಹಸಚಿವ ಡಾ| ಜಿ. ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಈಗ ಮತ್ತೂಮ್ಮೆ ಅವರನ್ನು ಭೇಟಿಯಾಗಿರುವುದು ತೀವ್ರ ಕುತೂಹಲ ಕೆರಳಿಸಿದೆ.
ನಗರದ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇರುವ ಗೆಸ್ಟ್ ಹೌಸ್‌ನಲ್ಲಿ ಪರಮೇಶ್ವರ್ ಅವರನ್ನು ಸತೀಶ್ ಜಾರಕಿಹೊಳಿ ಭೇಟಿಯಾಗಿ ಗೌಪ್ಯ ಮಾತುಕತೆ ನಡೆಸಿದರು. ಏನು ಮಾತನಾಡಿದ್ದಾರೆನ್ನುವುದು ತಿಳಿದು ಬಂದಿಲ್ಲ. ಸತೀಶ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಪರಮೇಶ್ವರ್ ನನ್ನನ್ನು ಊಟಕ್ಕೆ ಕರೆದಿದ್ದರು. ಹೀಗಾಗಿ ಊಟ ಮಾಡಲು ಬಂದಿದ್ದೆ ಅಷ್ಟೇ ಎಂದರು. ಬೇರೊಂದು ಕಾರ್ಯಕ್ರಮವೂ ಇಲ್ಲಿಯೇ ಇದ್ದ ಕಾರಣ ಬಂದಿದ್ದೆ. ಆಗ ಸಾಹೇಬ್ರನ್ನು ನೋಡ್ಕೊಂಡ್ ಹೋದೆ ಅಷ್ಟೇ, ಬೇರೆ ಏನು ಚರ್ಚೆ ನಡೆಯುತ್ತದೆ ನಮ್ಮ ನಡುವೆ ಎಂದು ಪ್ರಶ್ನಿಸಿದರು.
ದಿಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿರುವ ಬಗ್ಗೆ ಮಾಧ್ಯಮ ದವರ ಪ್ರಶ್ನೆಗೆ, ಅದು ಕೂಡ ಅಷ್ಟೇ, ಅವರು ನಮ್ಮ ರಾಷ್ಟ್ರೀಯ ಅಧ್ಯಕ್ಷರು. ಹೀಗಾಗಿ ಭೇಟಿಯಾಗಿದ್ದೇನೆ ಅಷ್ಟೇಎಂದರು. ದಲಿತ ಸಿಎಂ ಕೂಗಿನ ವಿಚಾರಕ್ಕೆ ಪ್ರತಿ ಕ್ರಿಯಿಸಿ, ದಲಿತ ಸಿಎಂ ವಿಚಾರದ ಪ್ರಸ್ತಾವನೆ ಸದ್ಯಕ್ಕಿಲ್ಲ, ಇದ್ದಾಗ ನಾವೇ ಕರೆದು ಹೇಳುತ್ತೇವೆ ಎಂದರು.