ಲೋಕಾಪುರ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇಲ್ಲದೇ ರೋಗಿಗಳು ಪರದಾಡುವಂತಾಗಿದೆ.
ರಾಜ್ಯ ಹೆದ್ದಾರಿ ಪಕ್ಕದಲ್ಲಿರುವ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಲವು ಗ್ರಾಮಗಳ ರೋಗಿಗಳು ಬರುತ್ತಾರೆ. ಅಪಘಾತವಾದಾಗ ಪ್ರಥಮ ಚಿಕಿತ್ಸೆ ನೀಡಬೇಕಾದ ಕೇಂದ್ರದಲ್ಲಿ ಸುಮಾರು ವರ್ಷದಿಂದ ವೈದ್ಯರು ಇಲ್ಲದೆ ಆಯುಷ್ ವೈದ್ಯ ಮತ್ತು ಶುಶ್ರೂಷಕಿಯರೇ ಇಲ್ಲಿ ತಪಾಸಣೆ ಮಾಡಿ ಚಿಕಿತ್ಸೆ ನೀಡುತ್ತಾರೆ.
ಕೆಲ ತಿಂಗಳ ಹಿಂದೆ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ ಗುಂಡುರಾವ್ ಅವರು ಅನೀರೀಕ್ಷಿತವಾಗಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದಾಗ ನಾಗರಿಕರು ವೈದ್ಯರ ಕೊರತೆ ಬಗ್ಗೆ ಸಚಿವರ ಗಮನಕ್ಕೆ ತಂದಿದ್ದರು. ಸಚಿವರ ಪಕ್ಕದಲ್ಲಿದ್ದ ಅಂದಿನ ಜಿಲ್ಲಾ ಆರೋಗ್ಯ ಅಧಿಕಾರಿಗಳಿಗೆ ವೈದ್ಯರ ನೇಮಕಕ್ಕೆ ಸೂಚಿಸಿದ್ದರು. ಆದರೆ ಈವರೆಗೂ ವೈದ್ಯರ ನೇಮಕವಾಗಿಲ್ಲ, ಸಚಿವರ ಮಾತಿಗೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ನಾಗರಿಕರು ದೂರುತ್ತಿದ್ದಾರೆ.
ಇಲ್ಲಿರುವ ಸಿಬ್ಬಂದಿ ಸಮಯ ಪಾಲಿಸುತ್ತಿಲ್ಲ. ಹೆರಿಗೆಗೆ ಬರುವ ರೋಗಿಗಳಿಗೆ ನೆಪ ಹೇಳಿ ಮುಧೋಳದ ಖಾಸಗಿ ಆಸ್ಪತ್ರೆಗೆ ಕಳಿಸುತ್ತಾರೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.