ಬೆಳಗಾವಿ: ‘ಪೋಷಣ್ ಟ್ರ್ಯಾಕರ್ ಆಯಪ್ ಹ್ಯಾಕ್ ಮಾಡುತ್ತಿರುವ ಮಾಹಿತಿ ಸಿಕ್ಕಿದ್ದು, ರಾಜ್ಯದ ಗರ್ಭಿಣಿಯರು ಮತ್ತು ಬಾಣಂತಿಯರು ಸೈಬರ್ ವಂಚಕರಿಂದ ಎಚ್ಚರದಿಂದ ಇರಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳಕರ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪೋಷಣ್ ಆಯಪ್‌ನಲ್ಲಿ ಅಂಗನವಾಡಿ ಕೇಂದ್ರಗಳ ಮಕ್ಕಳ ಹಾಜರಾತಿ, ಗರ್ಭಿಣಿಯರು ಮತ್ತು ಬಾಣಂತಿಯರ ಸಂಖ್ಯೆ, ಅವರಿಗೆ ಬಿಡುಗಡೆಯಾದ ಹಣ ಮತ್ತಿತರ ವಿವರ ಹಾಕಿರುತ್ತೇವೆ.
ಇದನ್ನೇ ಬಳಸಿಕೊಂಡು ಕೆಲವು ವಂಚಕರು ಲಿಂಕ್ ಸಿದ್ಧಪಡಿಸಿ ನಿಮಗೆ ಕಳುಹಿಸುತ್ತಾರೆ. ಅದನ್ನು ಕ್ಲಿಕ್ ಮಾಡಿದರೆ ನಿಮ್ಮ ಖಾತೆಯಿಂದ ಹಣ ಎತ್ತುತ್ತಾರೆ. ಇಂಥದರ ಬಗ್ಗೆ ಎಚ್ಚರ ವಹಿಸಿ’ ಎಂದರು.
‘ವಂಚನೆ ಪ್ರಕರಣ ಗೊತ್ತಾಗುತ್ತಲೇ ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದೇವೆ. ಜತೆಗೆ 70 ಸಾವಿರ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಮೂಲಕವೂ ಸಂದೇಶ ಕಳುಹಿಸಿ, ಜಾಗೃತಿ ಮೂಡಿಸುತ್ತಿದ್ದೇವೆ’ ಎಂದು ಹೇಳಿದರು.