ಕಿತ್ತೂರು: ‘ಇಲ್ಲಿಯ ಕೋಟೆ ಆವರಣಕ್ಕೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅ. 8ಕ್ಕೆ ಭೇಟಿ ನೀಡಿ, ಮಹತ್ವಾಕಾಂಕ್ಷೆಯ ಯೋಜನೆ ಆಗಿರುವ ‘ಥೀಮ್ ಪಾರ್ಕ್’ ಸೇರಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ’ ಎಂದು ಶಾಸಕ ಬಾಬಾಸಾಹೇಬ ಪಾಟೀಲ ತಿಳಿಸಿದರು.
ಕೋಟೆ ಆವರಣದೊಳಗೆ ನಡೆದಿರುವ ಸ್ವಚ್ಛತೆ ಮತ್ತು ಇತರ ಸಿದ್ಧತಾ ಕಾರ್ಯ ವೀಕ್ಷಣೆಗೆ ಅಧಿಕಾರಿಗಳ ಜತೆ ಶನಿವಾರ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ಅ. 23 ರಿಂದ 25 ರವರೆಗೆ ನಡೆಯಲಿರುವ ‘ಚನ್ನಮ್ಮನ ಕಿತ್ತೂರು ಉತ್ಸವ’ ಆಚರಣೆಯಲ್ಲಿ ಭಾಗವಹಿಸಲಿರುವ ಗಣ್ಯ ವ್ಯಕ್ತಿಗಳು ಮತ್ತು ಕಲಾವಿದರಿಗೆ ಉಳಿದುಕೊಳ್ಳುವ ವ್ಯವಸ್ಥೆಯ ಬಗ್ಗೆಯೂ ಉಪವಿಭಾಗಾಧಿಕಾರಿ ಪ್ರಭಾವತಿ ಫಕ್ಕೀರಪುರ ಜತೆ ಚರ್ಚೆ ನಡೆಸಿದರು.
ತಹಶೀಲ್ದಾರ್ ರವೀಂದ್ರ ಹಾದಿಮನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕಿರಣ ಘೋರ್ಪಡೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಲ್ಲಯ್ಯ ಹಿರೇಮಠ, ಲೋಕೋಪಯೋಗಿ ಇಲಾಖೆ ಎಇಇ ಸಂಜೀವ ಮಿರಜಕರ, ಪ್ರಾಚ್ಯವಸ್ತು ಇಲಾಖೆ ಎಇಇ ಶ್ರೀಕಂಡೆ, ರಾಘವೇಂದ್ರ, ಪ್ರೊ. ಎನ್. ಎಸ್. ಗಲಗಲಿ ಇದ್ದರು.