ಹೊಸದಿಲ್ಲಿ: ತುಟ್ಟಿ ಭತ್ತೆ ಪರಿಷ್ಕರಿಸುವ ಮೂಲಕ ಕೇಂದ್ರ ಸರಕಾರವು ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಹೆಚ್ಚಳ ಮಾಡಿದೆ. ದಿನೇ ದಿನೆ ಹೆಚ್ಚಾಗುತ್ತಿರುವ ಜೀವನ ವೆಚ್ಚವನ್ನು ನಿಭಾಯಿಸಲು ಕಾರ್ಮಿಕರಿಗೆ ಅನುಕೂಲವಾಗಲಿ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕಾರ್ಮಿಕ ಹಾಗೂ ಉದ್ಯೋಗ ಸಚಿವಾಲಯ ತಿಳಿಸಿದೆ.
ಅ.1ರಿಂದ ಈ ಪರಿಷ್ಕೃತ ಕನಿಷ್ಠ ವೇತನವು ಅನ್ವಯವಾಗಲಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕರು, ಲೋಡಿಂಗ್-ಅನ್‌ಲೋಡಿಂಗ್, ಕಸ ಗುಡಿಸುವ ಕಾರ್ಮಿಕರು, ಸ್ವತ್ಛತಾ ಕಾರ್ಮಿಕರು, ಮನೆಗೆಲಸದ ಕಾರ್ಮಿಕರು, ಗಣಿಗಾರಿಕೆ, ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿನ ಕಾರ್ಮಿಕರು ಇದರ ಲಾಭ ಪಡೆಯಲಿದ್ದಾರೆ.
ಪರಿಷ್ಕರಣೆ ಬಳಿಕ ಕನಿಷ್ಠ ವೇತನ: ಪರಿಷ್ಕರಣೆ ಬಳಿಕ ಕಾರ್ಮಿಕರಿಗೆ ದಿನಕ್ಕೆ 783 ರೂ.(20,358 ರೂ ತಿಂಗಳಿಗೆ), ಅರೆಕೌಶಲ ಕಾರ್ಮಿಕರಿಗೆ ದಿನಕ್ಕೆ 868 ರೂ.(22,568 ತಿಂಗಳಿಗೆ), ಕೌಶಲಯುಕ್ತ ಕಾರ್ಮಿಕರಿಗೆ ದಿನಕ್ಕೆ 954 ರೂ.(24,804 ರೂ. ತಿಂಗಳಿಗೆ) ಹಾಗೂ ಹೆಚ್ಚಿನ ಕೌಶಲವುಳ್ಳ ಕಾರ್ಮಿಕರಿಗೆ ದಿನಕ್ಕೆ 1,035 ರೂ.(26,910 ರೂ. ತಿಂಗಳಿಗೆ) ಕನಿಷ್ಠ ವೇತನ ನಿಗದಿಯಾಗಿದೆ.