ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಅತೀ ವೇಗವಾಗಿ ವಾಹನ ಚಲಾಯಿಸುವುದರ ಸಹಿತ ಸಂಚಾರ ನಿಯಮ ಉಲ್ಲಂಘಿಸುವವರ ಚಾಲನ ಪರವಾನಗಿ ರದ್ದುಪಡಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ವಿಧಾನಸೌಧ ಮುಂಭಾಗದ ಮೆಟ್ಟಿಲುಗಳ ಮೇಲೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಮುಖ್ಯಮಂತ್ರಿಗಳ ಆಪತ್ಕಾಲಯಾನ ಸೇವೆ’ ಅಡಿಯಲ್ಲಿ ನೂತನ 65 ಆಯಂಬುಲೆನ್ಸ್‌ಗಳನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿ ನಮ್ಮ ಸರಕಾರ ರಸ್ತೆ ಸುರಕ್ಷೆಗೆ ಆದ್ಯತೆ ನೀಡುತ್ತಿದ್ದು, ಅಪಘಾತ ಪ್ರಕರಣಗಳಲ್ಲಿ ಸಾವುನೋವು ತಡೆಯಲು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತಿದೆ.
ಆದರೆ ಸಂಚಾರ ನಿಯಮಗಳ ಉಲ್ಲಂಘನೆ ನಡೆಯುತ್ತಲೇ ಇದೆ. ಹೀಗಾಗಿ ಗಂಭೀರ ಸ್ವರೂಪದಲ್ಲಿ ಸಂಚಾರ ನಿಯಮ ಉಲ್ಲಂ ಸುವವರ ವಾಹನ ಚಾಲನೆ ಪರವಾನಿಗೆ ರದ್ದು ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳು ವೇದಿಕೆಯಲ್ಲಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಸೂಚನೆ ನೀಡಿದರು.
ವಿದೇಶಗಳಲ್ಲಿ ರಸ್ತೆ ಸುರಕ್ಷೆಯ ನಿಯಮಗಳನ್ನು ಉಲ್ಲಂಘಿಸಿದ ತತ್‌ಕ್ಷಣ ಪರವಾನಿಗೆ ರದ್ದು ಮಾಡುತ್ತಾರೆ. ನಮ್ಮಲ್ಲೂ ಇದೇ ಕ್ರಮ ಅನುಸರಿಸಬೇಕು. ಬಳಿಕ ಬೇಕಾದರೆ ಅವರು ಕೋರ್ಟ್‌ಗೆ ಹೋಗಲಿ. ಸಾರಿಗೆ ಇಲಾಖೆ ಮತ್ತು ಪೊಲೀಸರು ಈ ಕ್ರಮ ತೆಗೆದುಕೊಳ್ಳಬೇಕು. ಇಂತಹ ಕ್ರಮಗಳಿಂದ ಅಪಘಾತಗಳ ಸಂಖ್ಯೆ ತಗ್ಗಿಸಬಹುದು ಎಂದು ಮುಖ್ಯಮಂತ್ರಿಗಳು ಹೇಳಿದರು.