ಮುಧೋಳ: ಸೂಕ್ತ ನಿರ್ವಹಣೆ ಕೊರತೆಯಿಂದಾಗಿ ನಗರದ ಮಧ್ಯಭಾಗದಲ್ಲಿರುವ ಸಮುದಾಯ ಭವನವೊಂದು ಪಾಳು ಕೊಂಪೆಯಂತಾಗುತ್ತಿದ್ದು, ಸಾರ್ವಜನಿಕರ ಅನೈತಿಕ ಚಟುವಟಿಕೆ ತಾಣವಾಗಿ ಬದಲಾಗಿದೆ.
ಬಸ್ ನಿಲ್ದಾದಿಂದ ಕೂಗಳತೆ ದೂರದಲ್ಲಿರುವ ಶ್ರೀ ಮಹರ್ಷಿ ವಾಲ್ಮೀಕಿ ಭವನದ ನಿರ್ವಹಣೆಗೆ ನಗರಸಭೆ ಮುಂದಾಗದಿರುವ ಕಾರಣ ಭವನದ ಆವರಣ ಮತ್ತು ಭವನದೊಳಗೆ ಕಸಕಡ್ಡಿಯಥೇಚ್ಛವಾಗಿ ಬೆಳೆದುಕೊಂಡಿದೆ.
ಸುಂದರ ಸಮಾರಂಭ ಹಾಗೂ ವಿವಿಧ ಶುಭ ಕಾರ್ಯಗಳಿಗೆ ಬಳಕೆಯಾಗಬೇಕಿದ್ದ ಭವನಕ್ಕೆ ಗ್ರಹಣ ಹಿಡಿದಿದ್ದು ಅಧಿಕಾರಿಗಳು ಕನಿಷ್ಠ ಸ್ವಚ್ಛತೆಗೂ ಮುಂದಾಗದಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಮಲಮೂತ್ರ ವಿಸರ್ಜನೆ ಕೆಂದ್ರವಾದ ಭವನ : ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ವಾಲ್ಮೀಕಿ ಭವನ ಇಂದು ಸಾರ್ವಜನಿಕರ ಮಲಮೂತ್ರ ವಿಸರ್ಜನೆ ಕೇಂದ್ರವಾಗಿ ಬದಲಾಗಿದೆ. ಭವನದೆದುರಿನ ಗೇಟ್ ಕಿತ್ತು ಹೋಗಿದ್ದು ಅಕ್ಕಪಕ್ಕದ ಸಾರ್ವಜನಿಕರು ಭವನದ ಅಂಗಳದಲ್ಲಿಯೇ ಮಲಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಭವನದ ಸಮೀಪ ಸುತ್ತ ದುರ್ವಾಸನೆ ಬೀರುತ್ತಿದ್ದು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಉಂಟಾಗಿದೆ.