ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಹೊಸೂರು ಗ್ರಾಮದ ಹದ್ದಿಯಲ್ಲಿ ಶುಕ್ರವಾರ ತಡರಾತ್ರಿ, ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಅಪಘಾತ ಎಂಬಂತೆ ಬಿಂಬಿಸಲಾಗಿದೆ. ತಡರಾತ್ರಿಯೇ ಕಾರ್ಯಪ್ರವೃತ್ತರಾದ ಇಲ್ಲಿನ ಪೊಲೀಸರು ನಾಲ್ಕೇ ತಾಸಿನಲ್ಲಿ ಪ್ರಕರಣ ಭೇದಿಸಿ ಮೂವರನ್ನು ಬಂಧಿಸಿದ್ದಾರೆ.
ಬೈಕ್ ಮೇಲೆ ತೆರಳುತ್ತಿದ್ದ, ಗ್ರಾಮದ ಹಿರಿಯ ವಿಠ್ಠಲ ಜೋತಪ್ಪ ರಾಮಗೋನಟ್ಟಿ (60) ಕೊಲೆಯಾದವರು. ಬೈಕ್ ಓಡಿಸುತ್ತಿದ್ದ ಭೀಮಪ್ಪ ಅವರ ಹಿಂದಿದ್ದ ಬಾಬು ಗಾಯಗೊಂಡಿದ್ದಾರೆ. ಭೀಮಪ್ಪ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕಿಗೆ ಕಾರು ಡಿಕ್ಕಿ ಹೊಡೆಸಲಾಗಿದೆ. ಆದರೆ, ಭೀಮಪ್ಪ ಬೈಕ್ ಓಡಿಸುತ್ತಿದ್ದರು. ಬಾಬು ಮಧ್ಯದಲ್ಲಿ, ವಿಠ್ಠಲ ಕೊನೆಯಲ್ಲಿ ಕುಳಿತಿದ್ದರು. ಕಾರು ನೇರವಾಗಿ ವಿಠ್ಠಲ ಅವರಿಗೆ ಗುದ್ದಿ, 50 ಮೀಟರ್ ದೂರ ಎಳೆದುಕೊಂಡು ಹೋಗಿದ್ದರಿಂದ ಅವರು ಸ್ಥಳದಲ್ಲೇ ಸಾನ್ನಪ್ಪಿದ್ದಾರೆ. ಜಮೀನು ವಿವಾದವೇ ಘಟನೆಗೆ ಕಾರಣ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.
ಇಂಗಳಗಿ ಗ್ರಾಮದ ಲಾಜ್ಮಿ, ಯಾಸ್ಮಿನ್, ಮೊಹಮ್ಮದ್ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.