ಬೆಂಗಳೂರು: ‘ಲೋಕಾಯುಕ್ತದ ಹೆಸರಿನಲ್ಲಿ ಕೆಲವು ಖಾಸಗಿ ವ್ಯಕ್ತಿಗಳು ಸರ್ಕಾರಿ ನೌಕರರಿಗೆ ಕರೆ ಮಾಡಿ, ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಅಂತಹ ಕರೆ ಬಂದರೆ ತಕ್ಷಣವೇ ಗಮನಕ್ಕೆ ತನ್ನಿ’ ಎಂದು ಲೋಕಾಯುಕ್ತವು ಹೇಳಿದೆ.
‘ಸರ್ಕಾರಿ ನೌಕರರಿಗೆ ಕರೆ ಮಾಡಿ, ನಿಮ್ಮ ವಿರುದ್ಧ ಪ್ರಕರಣ ದಾಖಲಿಸದೇ ಇರಲು ಅಥವಾ ಪ್ರಕರಣ ರದ್ದುಪಡಿಸಲು ಹಣ ನೀಡುವಂತೆ ಕೆಲವರು ಒತ್ತಾಯಿಸುತ್ತಿರುವ ಬಗ್ಗೆ ದೂರು ಬಂದಿದೆ.
ಲೋಕಾಯುಕ್ತದಿಂದ ಯಾವುದೇ ವ್ಯಕ್ತಿಗಳು ಹಾಗೆ ಕರೆ ಮಾಡುವುದಿಲ್ಲ. ಅಂತಹ ಕರೆ ಬಂದರೆ, ಅದು ವಂಚಕರದ್ದಾಗಿರುತ್ತದೆ’ ಎಂದು ಲೋಕಾಯುಕ್ತವು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇಂಥದ್ದೇ ಕರೆ ಬಂದ ಬಗ್ಗೆ ಈಚೆಗೆ ಲೋಕಾಯುಕ್ತಕ್ಕೆ ದೂರು ಬಂದಿದ್ದು, ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ತನಿಖೆ ಆರಂಭಿಸಲಾಗಿದೆ.