ಮಂಡ್ಯ, ಸೆಪ್ಟೆಂಬರ್ 19: ಸಂಘದ ಸಾಲದ ಕಂತು ಕಟ್ಟಲಾಗದೇ ರೈತ ಮಹಿಳೆ ಸಾವಿಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಮಲಿಯೂರು ಗ್ರಾಮದಲ್ಲಿ ನಡೆದಿದೆ. ಮಲಿಯೂರು ಗ್ರಾಮದ ಮಹಾಲಕ್ಷ್ಮೀ (38) ಮೃತ ಮಹಿಳೆ ಎಂದು ಗುರುತಿಸಲಾಗಿದೆ. ಈ ಘಟನೆಯಲ್ಲಿ ಧರ್ಮಸ್ಥಳ ಸಂಘದ ಸಾಲದ ಕಂತು ಕಟ್ಟಲಾಗದೇ ಕಿರುಕುಳ ತಾಳಲಾರದೇ ಮಹಿಳೆ ಸಾವಿಗೆ ಶರಣಾದ ಆರೋಪ ಕೇಳಿಬಂದಿದೆ.
ಮಲಿಯೂರು ಗ್ರಾಮದ ಮಹಾಲಕ್ಷ್ಮೀ ಕೆಲವು ಸಮಯದ ಹಿಂದೆ ಧರ್ಮಸ್ಥಳ ಸಂಘದಲ್ಲಿ 2 ಲಕ್ಷ ರೂಪಾಯಿ ಸಾಲ ತೆಗೆದುಕೊಂಡಿದ್ದರು. ಪ್ರತಿ ಬುಧವಾರ 1,700 ರೂಪಾಯಿ ಕಂತು ಕಟ್ಟಬೇಕಿತ್ತು. ಈ ವಾರ ಅಂದರೆ ನಿನ್ನೆ ಸಂಘದ ಸಾಲದ ಕಂತು ಕಟ್ಟಲು ಹಣದ ಕೊರೆತೆಯಾಗಿತ್ತು. ಹೀಗಾಗಿ ಮಹಾಲಕ್ಷ್ಮೀ ಹಣ ಕಟ್ಟಲು ಸಮಯಾವಕಾಶ ಕೇಳಿದ್ದರು. ಆದರೆ ಧರ್ಮಸ್ಥಳ ಸಂಘದ ಸಿಬ್ಬಂದಿ ಮಹಿಳೆಗೆ ಅವಕಾಶ ನೀಡದೇ ಅವಾಚ್ಯ ಶಬ್ದದಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.