ಬೆಳಗಾವಿ: ಗಣೇಶ ಮೂರ್ತಿಗಳ ವಿಸರ್ಜನೆಯ ಅದ್ದೂರಿ ಮೆರವಣಿಗೆಗೆ ತೊಡಕಾಗದಿರಲಿ ಹಾಗೂ ಕಾನೂನು ಮತ್ತು ಸುವ್ಯವಸ್ಥೆಯು ಸಮಸ್ಯೆ ಆಗದಿರಲಿ ಎಂಬ ಉದ್ದೇಶದಿಂದ ಸೋಮವಾರದ ಈದ್ ಮಿಲಾದ್ ಮೆರವಣಿಗೆಯನ್ನು ಮುಸ್ಲಿಮರು ಸೆಪ್ಟೆಂಬರ್ 22ಕ್ಕೆ ಮುಂದೂಡಿದರು. ಉಳಿದಂತೆ ಇತರ ಧಾರ್ಮಿಕ ಕಾರ್ಯಗಳಲ್ಲಿ ಸಂಭ್ರಮದಿಂದ ಪಾಲ್ಗೊಂಡರು.
‘ಬೆಳಗಾವಿಯ ಗಣೇಶೋತ್ಸವ ದೇಶದಲ್ಲೇ ಪ್ರಸಿದ್ಧ. ಮೊದಲು ಅದು ಸಂಭ್ರಮದಿಂದ ನೆರವೇರಲಿ. ಸೆಪ್ಟೆಂಬರ್ 22ರಂದು ನಾವು ಈದ್-ಮಿಲಾದ್ ಮೆರವಣಿಗೆ ಮಾಡಲು ಇಸ್ಲಾಂ ಧರ್ಮಗುರುಗಳು ಮತ್ತು ಮುಸ್ಲಿಮರೆಲ್ಲ ಸೇರಿ ನಿರ್ಧರಿಸಿದೆವು. ಗಣೇಶ ಮೂರ್ತಿಗಳ ಮೆರವಣಿಗೆಯಲ್ಲಿ ಮುಸ್ಲಿಮರೂ ಪಾಲ್ಗೊಳ್ಳುತ್ತೇವೆ. ಈದ್ ಮೆರವಣಿಗೆಗೆ ಹಿಂದೂಗಳನ್ನು ಆಹ್ವಾನಿಸಿದ್ದೇವೆ’ ಎಂದು ಅಂಜುಮನ್-ಇ-ಇಸ್ಲಾಂ ಸಂಸ್ಥೆ ಅಧ್ಯಕ್ಷರೂ ಆಗಿರುವ ಶಾಸಕ ಆಸೀಫ್ ಸೇಠ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮುಸ್ಲಿಮರ ಈ ನಿರ್ಣಯ ಪ್ರಶಂಸನೀಯ. ಈದ್-ಮಿಲಾದ್ ಮೆರವಣಿಗೆಯಲ್ಲಿ ನಾವೂ ಭಾಗವಹಿಸಿ, ಭಾವೈಕ್ಯತೆ ಮೆರೆಯುತ್ತೇವೆ’ ಎಂದು ಸಾರ್ವಜನಿಕ ಗಣೇಶೋತ್ಸವ ಮಹಾಮಂಡಳಿ ಮುಖಂಡ ವಿಕಾಸ ಕಲಘಟಗಿ ಹೇಳಿದರು.