Breaking News

3 ವರ್ಷಗಳಲ್ಲಿ ಹೊಸ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

Spread the love

3 ವರ್ಷಗಳಲ್ಲಿ ಹೊಸ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

ಬೆಳಗಾವಿ: ‘ಕ್ರೀಡಾಪಟುಗಳಿಗೆ ಅಗತ್ಯವಿರುವ ಎಲ್ಲ ಆಧುನಿಕ ಸೌಲಭ್ಯ ಒಳಗೊಂಡ ಜಿಲ್ಲಾ ಕ್ರೀಡಾಂಗಣದ ಕಾಮಗಾರಿ ಮೂರು ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ರಾಮತೀರ್ಥ ನಗರದಲ್ಲಿ ನೂತನ ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

ಬೆಳಗಾವಿ | 3 ವರ್ಷಗಳಲ್ಲಿ ಹೊಸ ಕ್ರೀಡಾಂಗಣ ಸಿದ್ಧ: ಸಚಿವ ಸತೀಶ ಜಾರಕಿಹೊಳಿ

‘ಆವರಣ ಗೋಡೆ ನಿರ್ಮಾಣ, ನೆಲ ಸಮತಟ್ಟುಗೊಳಿಸುವುದು ಸೇರಿದಂತೆ ಮೊದಲ ಹಂತದ ಕಾಮಗಾರಿಗಳು ಒಂದು ವರ್ಷದೊಳಗೆ ಪೂರ್ಣಗೊಳ್ಳಲಿವೆ’ ಎಂದರು.

‘ಸದ್ಯ ಇರುವ ಜಿಲ್ಲಾ ಕ್ರೀಡಾಂಗಣದ ಲೀಸ್‌ ಅವಧಿ ಇನ್ನೆರಡು ವರ್ಷಗಳಲ್ಲಿ ಮುಕ್ತಾಯವಾಗಲಿದೆ. ಹಾಗಾಗಿ ಕ್ರೀಡಾ ಚಟುವಟಿಕೆಗಳು ಹಾಗೂ ಸರ್ಕಾರಿ ಕಾರ್ಯಕ್ರಮಗಳಿಗಾಗಿ ನಗರಕ್ಕೆ ಹೊಸ ಕ್ರೀಡಾಂಗಣದ ಅಗತ್ಯವಿತ್ತು. ಇದಕ್ಕೆ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ 17.36 ಎಕರೆ ಜಮೀನು ಮಂಜೂರುಗೊಳಿಸಿದ್ದು, ಮೊದಲ ಹಂತದ ಕಾಮಗಾರಿ ಆರಂಭಿಸಲಾಗುವುದು. ಟ್ರ್ಯಾಕ್‌ಗಳು, ಗ್ಯಾಲರಿಗಳು, ಇತರೆ ಕಾಮಗಾರಿಗಳನ್ನು ಎರಡನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದು ಹೇಳಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನವೇ, ಹೊಸ ಜಿಲ್ಲಾ ಕ್ರೀಡಾಂಗಣಕ್ಕೆ ಚಿಂತನೆ ನಡೆಸಿದ್ದೆವು. ನಾವು ಅಧಿಕಾರ ಹಿಡಿದ ನಂತರ, ಈ ಪ್ರಕ್ರಿಯೆ ಚುರುಕುಗೊಳಿಸಿದೆವು. ಜಾಗ ಗುರುತಿಸಿದೆವು. ಮೊದಲ ಹಂತದ ಕಾಮಗಾರಿಗೆ ₹10 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದರು.

‘ಹೊಸ ಕ್ರೀಡಾಂಗಣಕ್ಕೆ ಗುರುತಿಸಿದ ಜಾಗದಲ್ಲಿ ದೇವಸ್ಥಾನ ಇದೆ. ಅದನ್ನು ಸ್ಥಳಾಂತರಿಸಲು ದೇವಸ್ಥಾನದ ಆಡಳಿತ ಮಂಡಳಿ ಸಮ್ಮತಿ ಸೂಚಿಸಿದೆ. ಕ್ರೀಡಾಂಗಣ ಪಕ್ಕದಲ್ಲೇ ದೇವಾಲಯದ ಪುನರ್‌ನಿರ್ಮಾಣ ಮಾಡಲಾಗುವುದು. ನಿವಾಸಿಗಳ ಬೇಡಿಕೆಯಂತೆ, ಅಲ್ಲಿ ಸಮುದಾಯ ಭವನ ಸಹ ನಿರ್ಮಿಸಲಾಗುವುದು’ ಎಂದು ಹೇಳಿದರು.

‘ಹೊಸ ಕ್ರೀಡಾಂಗಣದಲ್ಲಿ ಲಭ್ಯವಾಗುವ ಸೌಕರ್ಯ ಬಳಸಿಕೊಂಡು, ಈ ಭಾಗದ ಕ್ರೀಡಾಪಟುಗಳು ಸಾಧನೆಯ ನಾಗಾಲೋಟದಲ್ಲಿ ಮುನ್ನುಗ್ಗಬೇಕು’ ಎಂದು ಕರೆಕೊಟ್ಟರು.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ, ಮಹಾನಗರ ಪಾಲಿಕೆ ಸದಸ್ಯರಾದ ಹನುಮಂತ ಕೊಂಗಾಲಿ, ರವಿ ಸಾಳುಂಕೆ, ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌, ನಗರ ಪೊಲೀಸ್‌ ಕಮಿಷನರ್‌ ಯಡಾ ಮಾರ್ಟಿನ್‌ ಮಾರ್ಬನ್ಯಾಂಗ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ಇತರರಿದ್ದರು.


Spread the love

About Laxminews 24x7

Check Also

ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!

Spread the love ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ