ನವದೆಹಲಿ: ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಉದ್ಯಾನವನದಲ್ಲಿ ಇಬ್ಬರು ಪ್ರವಾಸಿಗರು ಮೂತ್ರ ವಿಸರ್ಜನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಬೆನ್ನಲ್ಲೇ ಭಾರತೀಯ ಪುರಾತತ್ವ ಇಲಾಖೆ ತನಿಖೆಗೆ ಆದೇಶಿಸಿದ್ದು, ಭದ್ರತಾ ಕ್ರಮಗಳನ್ನು ಹೆಚ್ಚಿಸಲು ನಿರ್ಧರಿಸಿದೆ.
ವೈರಲ್ ಆಗುತ್ತಿರುವ ವಿಡಿಯೋವನ್ನು ಯಾವಾಗ ಸೆರೆಹಿಡಿಯಲಾಗಿದೆ ಮತ್ತು ಯಾರು ಅದನ್ನು ವೈರಲ್ ಮಾಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ತನಿಖೆ ನಡೆಸಲಾಗುತ್ತಿದೆ. ವೈರಲ್ ವಿಡಿಯೋವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಉದ್ಯಾನಗಳಲ್ಲಿ ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಿಸಲು ಚಿಂತಿಸುತ್ತಿರುವುದಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ತಿಳಿಸಿದೆ.
ಇಂಡಿಯಾ ಟುಡೆ ಮಾಧ್ಯಮದ ಜತೆ ಆಗ್ರಾ ಪುರಾತತ್ವ ಇಲಾಖೆ ಮುಖ್ಯಸ್ಥ ಆರ್‌ಕೆ ಪಟೇಲ್ ಮಾತನಾಡಿ, ವೈರಲ್ ವಿಡಿಯೋ ಸಂಬಂಧ ತಾಜ್ ಮಹಲ್ ಉಸ್ತುವಾರಿಯಿಂದ ವಿವರಣೆಯನ್ನು ಕೇಳಲಾಗುತ್ತಿದೆ ಮತ್ತು ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ಉದ್ಯಾನಗಳಲ್ಲಿ ಕಣ್ಗಾವಲನ್ನು ಹೆಚ್ಚಿಸಲು ಭದ್ರತಾ ಸಿಬ್ಬಂದಿಗೆ ತಿಳಿಸಲಾಗಿದೆ ಎಂದರು.
ಇದೊಂದು ನಾಚಿಕೆಗೇಡಿನ ಘಟನೆ ಎಂದು ಕರೆದ ಗೈಡ್ ಅಸೋಸಿಯೇಶನ್ ಅಧ್ಯಕ್ಷ ದೀಪಕ್ ದಾನ್, ತಾಜ್ ಮಹಲ್ ಸಂಕೀರ್ಣದಲ್ಲಿ ಸಿಐಎಸ್‌ಎಫ್ ಮತ್ತು ಎಎಸ್‌ಐ ಸಿಬ್ಬಂದಿ ಇದ್ದರೂ ಇದು ಸಂಭವಿಸಿರುವುದು ದುರಾದೃಷ್ಟಕರ ಎಂದರು. ತಾಜ್ ಮಹಲ್ ಕಾಂಪ್ಲೆಕ್ಸ್ನಲ್ಲಿ ಎರಡು ಶೌಚಾಲಯ ನಿರ್ಮಿಸಿದ್ದರೂ ಪ್ರವಾಸಿಗರು ಉದ್ಯಾನದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿರುವುದನ್ನು ಈ ಯಾವ ಇಲಾಖೆಗಳೂ ಏಕೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪ್ರಶ್ನಿಸಿದರು
ಆಗ್ರಾ ಟೂರಿಸ್ಟ್ ವೆಲ್ಫೇರ್ ಚೇಂಬರ್‌ನ ಕಾರ್ಯದರ್ಶಿ ವಿಶಾಲ್ ಶರ್ಮ ಅವರು ಸಿಐಎಸ್‌ಎಫ್ ಮತ್ತು ಎಎಸ್‌ಐ ಸಿಬ್ಬಂದಿಯನ್ನು ಟೀಕಿಸಿದರು. ತಾಜ್ ಮಹಲ್ ಕಾಂಪ್ಲೆಕ್ಸ್ನಲ್ಲಿ ಭದ್ರತಾ ಕೊರತೆ ಇದೆ ಆರೋಪಿಸಿದರು. ತಾಜ್ ಮಹಲ್‌ನಲ್ಲಿ ಹೇಳಿಕೊಳ್ಳುವಷ್ಟು ಭದ್ರೆತೆ ಬಿಗಿಯಾಗಿಲ್ಲ ಎಂಬ ಸಂದೇಶವನ್ನು ಈ ಘಟನೆ ರವಾನಿಸುತ್ತದೆ ಎಂದು ಅಸಮಾಧಾನ ಹೊರಹಾಕಿದರು.
ಭಾರಿ ಮಳೆಗೆ ಸೋರುತ್ತಿದೆ ತಾಜ್ ಮಹಲ್‌ನ ಮುಖ್ಯ ಗುಮ್ಮಟ
ಆಗ್ರಾದಲ್ಲಿ ಸುರಿದ ಭಾರಿ ಮಳೆಗೆ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಹಾನಿಗೊಳಗಾಗಿದೆ. 48 ಗಂಟೆಗಳ ನಿರಂತರ ಮಳೆಯ ನಂತರ ತಾಜ್ ಮಹಲ್‌ನ ಮುಖ್ಯ ಗುಮ್ಮಟ ಸೋರುತ್ತಿರುವುದು ಕಂಡುಬಂದಿದೆ. ಭಾರತೀಯ ಪುರಾತತ್ವ ಇಲಾಖೆಯು ಹೆಚ್ಚಿನ ಮೇಲ್ವಿಚಾರಣೆಗಾಗಿ ಸಿಬ್ಬಂದಿಯನ್ನು ನಿಯೋಜಿಸಿದೆ. ಸ್ಮಾರಕದ ಸುತ್ತಲಿನ ಉದ್ಯಾನ ಜಲಾವೃತಗೊಂಡಿದೆ. ಅಲ್ಲದೆ, ಮೊಘಲ್ ದೊರೆ ಶಹಜಹಾನ್ನ ಸಮಾಧಿಗೂ ನೀರು ನುಗ್ಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಾಜ್ ಮಹಲ್‌ನಲ್ಲಿ ಎಲ್ಲೆಲ್ಲಿ ಸೋರಿಕೆಯಾಗುತ್ತಿದೆ ಎಂಬುದನ್ನು ಪತ್ತೆ ಹಚ್ಚಲು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪುರಾತತ್ವ ಇಲಾಖೆ ಅಧೀಕ್ಷಕ ಪುರಾತತ್ವಶಾಸ್ತ್ರಜ್ಞ ರಾಜ್‌ಕುಮಾರ್ ಪಟೇಲ್ ಹೇಳಿದ್ದಾರೆ. ಮಳೆ ಕಡಿಮೆಯಾದ ನಂತರ ಅಗತ್ಯ ದುರಸ್ತಿ ಕೈಗೊಳ್ಳಲು ನಿರ್ಧರಿಸಲಾಗಿದೆ.