ಕುಷ್ಟಗಿ (ಕೊಪ್ಪಳ): ಗಣೇಶ ಮೂರ್ತಿ ವಿಸರ್ಜನೆ ವೇಳೆ ನಟರಾದ ದರ್ಶನ್, ಸುದೀಪ್ ಹಾಡು ಹಾಕುವ ವಿಚಾರಕ್ಕೆ ಉಂಟಾದ ಅಭಿಮಾನಿಗಳ ವಾಗ್ವಾದದಿಂದ ವಿಸರ್ಜನ ಮೆರವಣಿಗೆ ಮೊಟಕುಗೊಂಡು ಗಣೇಶ ಮೂರ್ತಿ ಬೆಳಗಿನವರೆಗೂ ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಉಳಿದ ಘಟನೆ ಕಂದಕೂರು ಗ್ರಾಮದಲ್ಲಿ ನಡೆದಿದೆ.
ಈಶ್ವರ ದೇವಸ್ಥಾನದಲ್ಲಿ ಐದನೇ ದಿನ ಬುಧವಾರ ರಾತ್ರಿ ಗಣೇಶ ವಿಸರ್ಜನ ಮೆರವಣಿಗೆ ವೇಳೆ ಡಿಜೆ ಧ್ವನಿಗೆ ಯುವಕರು ಕುಣಿಯುತ್ತಿದ್ದ ವೇಳೆ ದರ್ಶನ್, ಸುದೀಪ್ ಹಾಡು ಮೊದಲು ಹಾಕಬೇಕೆಂದು ಎರಡು ಬಣಗಳು ವಾಗ್ವಾದಕ್ಕೆ ಇಳಿದವು. ಪ್ರಕರಣ ವಿಕೋಪಕ್ಕೆ ತಿರುಗುವುದನ್ನು ಅರಿತ ಹಿರಿಯರು ವಿಸರ್ಜನ ಮೆರವಣಿಗೆ ಮೊಟಕುಗೊಳಿಸಿದರು. ಅನಂತರ ಟ್ರಾಲಿಯಲ್ಲಿದ್ದ ಸಣ್ಣ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಿದರು. ಗುರುವಾರ ಮಧ್ಯಾಹ್ನ ಕೂಡಲಸಂಗಮದಲ್ಲಿ ವಿಸರ್ಜನೆ ಮಾಡಿದರು.