ವಿವಿಧ ಕಂಪನಿಗಳ ವತಿಯಿಂದ ಜಿಲ್ಲಾವಾರು ಉದ್ಯೋಗ ಮೇಳಗಳನ್ನು ಮಾಡಲಾಗುಯತ್ತಿದೆ. ಹಾಗೆಯೇ ಇದೀಗ ಬೆಂಗಳೂರಿನಲ್ಲಿ ನಾಳೆ ಅಂದರೆ ಸೆಪ್ಟೆಂಬರ್ 13ರಂದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಹಾಗಾದರೆ ಎಷ್ಟು ಕಂಪನಿಗಳು ನೋಂದಣಿಯಾಗಿವೆ ಹಾಗೂ ಎಷ್ಟು ಮಂದಿಗೆ ಆಹ್ವಾನ ನೀಡಲಾಗಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಸೆಪ್ಟೆಂಬರ್ 13ರಂದು ದೇವನಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಬೃಹತ್ ಉದ್ಯೋಗಮೇಳಕ್ಕೆ ಇದುವರೆಗೆ 116 ಕಂಪನಿಗಳು ನೋಂದಾಯಿಸಿಕೊಂಡಿದ್ದು, ವಿವಿಧ ಕಂಪನಿ ಹಾಗೂ ಏಜೆನ್ಸೀ ವತಿಯಿಂದ 28,840 ಉದ್ಯೋಗಗಳಿಗೆ ಬೇಡಿಕೆಯಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಶಿವಶಂಕರ್ ಅವರು ಹೇಳಿದರು.
ದೇವನಹಳ್ಳಿ ತಾಲ್ಲೂಕಿನ ಬೀರಸಂದ್ರ ಗ್ರಾಮದ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಉದ್ಯೋಗ ಮೇಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜಿಲ್ಲಾ ಮಟ್ಟದ ಬೃಹತ್ ಉದ್ಯೋಗಮೇಳದಲ್ಲಿ ಅಂದಾಜು 120 ಕ್ಕೂ ಅಧಿಕ ನಿಯೋಜಕರು/ಕಂಪನಿಗಳು ಹಾಗೂ 15,000 ಉದ್ಯೋಗಾಂಕ್ಷಿಗಳ ಭಾಗವಹಿಸುವ ಸಾಧ್ಯತೆಯಿದೆ. ಇದುವರೆಗೂ ನೇರ ಸಂದರ್ಶನ ಮೂಲಕ ಆಯ್ಕೆಗೆ ಅಂದಾಜು 8,000 ಉದ್ಯೋಗಗಳು ಬೇಡಿಕೆಯಿದೆ ಹಾಗೂ ಏಜೆನ್ಸಿ ಮೂಲಕ ಆಯ್ಕೆಗೆ 20,000 ಉದ್ಯೋಗಕ್ಕೆ ಬೇಡಿಕೆಯಿದೆ ಎಂದು ಹೇಳಿದರು.
ಪ್ರತಿ ಗ್ರಾಮ ಪಂಚಾಯಿತಿಗೆ 100 ಉದ್ಯೋಗಾಂಕ್ಷಿಗಳು ನೋಂದಣಿ ಹಾಗೂ ನಗರಸಭೆ ಮತ್ತು ಪುರಸಭೆ ವ್ಯಾಪ್ತಿಗಳಲ್ಲಿ 2000 ದಿಂದ 3000 ಉದ್ಯೋಗಾಂಕ್ಷಿಗಳು ನೋಂದಣಿ ಮಾಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ.