ಚಿತ್ರದುರ್ಗ: ನೀರಾವರಿ ಪಂಪ್‍ಸೆಟ್‍ಗೆ ಅಕ್ರಮವಾಗಿ ಹಾಕಿಕೊಂಡಿದ್ದ ನಿರಂತರ ಜ್ಯೋತಿ ವಿದ್ಯುತ್ ಲೈನ್ ಸಂಪರ್ಕವನ್ನು ಕಡಿತಗೊಳಿಸಿದ್ದಕ್ಕೆ ಬೆಸ್ಕಾಂ ಸಿಬ್ಬಂದಿಯ ಮೇಲೆ ಮಾರಕಾಸ್ತ್ರ ಹಾಗೂ ಚಪ್ಪಲಿಯಿಂದ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಐಮಂಗಲ ಗ್ರಾಮದ ಬೆಸ್ಕಾಂ ಕಚೇರಿ ಬಳಿ ನಡೆದಿದೆ
ಹಲವು ದಿನಗಳಿಂದ ಶಿವರಾಜ್ ಎನ್ನುವವರು ನಿಯಮಬಾಹಿರವಾಗಿ ವಿದ್ಯುತ್ ಸಂಪರ್ಕ ಹಾಕಿಕೊಂಡಿದ್ದರು. ಈ ಬಗ್ಗೆ ಲೈನ್‍ಮ್ಯಾನ್ ಕೇಶವ ಅವರು ಒಂದು ಬಾರಿ ಶಿವರಾಜ್‍ಗೆ ಎಚ್ಚರಿಕೆ ನೀಡಿದ್ದರು. ಆದರೆ ನಿನ್ನೆ ಆಕಸ್ಮಿಕವಾಗಿ ಲೈನ್ ಮ್ಯಾನ್ ಸ್ಥಳಕ್ಕೆ ಭೇಟಿ ನೀಡಿದ್ದಾಗಲು ಅಕ್ರಮ ಮತ್ತೆ ಮುಂದುವರೆದಿದ್ದ ಹಿನ್ನೆಲೆಯಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಬೆಸ್ಕಾಂ ಕಚೇರಿಗೆ ಸಿಬ್ಬಂದಿ ಹಿಂತಿರುಗಿದ್ದರು.
ಇದರಿಂದಾಗಿ ಆಕ್ರೋಶಗೊಂಡ ಶಿವರಾಜ್ ಹಾಗೂ ಅವರ ಮಕ್ಕಳಾದ ಚೇತನ್ ಮತ್ತು ನಿತನ್ ಬೆಸ್ಕಾಂ ಕಚೇರಿ ಬಳಿ ಬಂದು ದಾಂಧಲೆ ಮಾಡಿದ್ದಾರೆ. ಬೆಸ್ಕಾಂ ಕಚೇರಿ ಮುಂಭಾಗದಲ್ಲೇ ಮಾರಕಾಸ್ತ್ರಗಳನ್ನು ತೋರಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ. ಆಗ ಪರಸ್ಪರ ಸಿಬ್ಬಂದಿಗಳು ಹಾಗೂ ಶಿವರಾಜ್ ಕುಟುಂಬಸ್ತರ ನಡುವೇ ಮಾತಿನ ಚಕಮಕಿ, ವಾಗ್ವಾದ, ನೂಕಾಟ, ತಳ್ಳಾಟ ನಡೆದಿದೆ. ಬಳಿಕ ದಿಢೀರ್ ಎಂದು ಬೈಕ್‍ನಲ್ಲಿದ್ದ ಮಾರಾಕಾಸ್ತ್ರ ತೆಗೆದ ಶಿವರಾಜ್, ಬೆಸ್ಕಾಂ ಸಿಬ್ಬಂದಿಯಾಗಿರುವ ಕೇಶವ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ.