ಬೆಂಗಳೂರು: ಪರೀಕ್ಷಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸೆ.22ರಂದು ನಿಗದಿಪಡಿಸಿರುವ ಪಿಎಸ್ಐ ಪರೀಕ್ಷೆಯನ್ನು ಮುಂದೂಡಿ ಕ್ರಮ ವಹಿಸುವ ಪ್ರಯತ್ನ ಮಾಡುವುದಾಗಿ ಗೃಹ ಸಚಿವರು ತಿಳಿಸಿದ್ದಾಗಿ ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ್ ಅವರು ತಿಳಿಸಿದರು.

ಬಿಜೆಪಿ ಯುವ ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಧೀರಜ್ ಮುನಿರಾಜು ಹಾಗೂ ಪರೀಕ್ಷಾರ್ಥಿಗಳು ಇಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಬೆಂಗಳೂರಿನ ಸದಾಶಿವನಗರದ ಸರ್ಕಾರಿ ನಿವಾಸಕ್ಕೆ ಭೇಟಿ ನೀಡಿ ಪಿಎಸ್‍ಐ ಪರೀಕ್ಷೆಯನ್ನು ಮುಂದೂಡಬೇಕೆಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಸಿ.ಎನ್. ಅಶ್ವತ್ಥನಾರಾಯಣ್ ಅವರು, ಪರೀಕ್ಷೆ ಮುಂದೂಡುವ ವಿಶ್ವಾಸವಿದೆ. 402 ಹುದ್ದೆ ಪೈಕಿ 102 ಜನರು ಹಾಲ್ ಟಿಕೆಟ್ ಹೊಂದಿದವರು ಯುಪಿಎಸ್ಸಿ ಮೈನ್ಸ್ ಗೆ ಆಯ್ಕೆಯಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಿರುವ ಸಾಧ್ಯತೆ ಇದೆ. ಯುಪಿಎಸ್ಸಿ ಮೈನ್ಸ್ ಗೆ ಆಯ್ಕೆಯಾದವರು ಪಿಎಸ್‍ಐ ಪರೀಕ್ಷೆಯಲ್ಲಿ 100ಕ್ಕೆ ನೂರು ಆಯ್ಕೆ ಆಗಿಯೇ ಆಗುತ್ತಾರೆ. ಅವರಿಗೆ ಅನ್ಯಾಯ ಆಗಬಾರದು ಎಂದು ನುಡಿದರು.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ಲಕ್ಷ್ಯದಿಂದ, ಬೇಜವಾಬ್ದಾರಿಯಿಂದ ಒಂದೇ ದಿನಾಂಕವನ್ನು ನಿಗದಿ ಮಾಡಿದ್ದಾರೆ. ಇದನ್ನು ತಕ್ಷಣ ಸರಿಪಡಿಸಲು ಗೃಹ ಸಚಿವರಲ್ಲಿ ಕೋರಿದ್ದೇವೆ. ನ್ಯಾಯಬದ್ಧ ಕೋರಿಕೆಯನ್ನು ಗೃಹ ಸಚಿವರು ಈಡೇರಿಸುವ ವಿಶ್ವಾಸವನ್ನು ಹೊಂದಿರುವುದಾಗಿ ಪ್ರಶ್ನೆಗೆ ಉತ್ತರಿಸಿದರು.
Laxmi News 24×7