ಬೆಂಗಳೂರು, ಸೆಪ್ಟೆಂಬರ್ 10: ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳಲ್ಲಿ ಹೆಣ್ಣು ಮಕ್ಕಳ ಜನನವನ್ನು ಉತ್ತೇಜಿಸುವ ದೃಷ್ಟಿಯಿಂದ ಅಂದಿನ ಬಿಜೆಪಿ ಸರ್ಕಾರ ಭಾಗ್ಯಲಕ್ಷೀ ಯೋಜನೆಯನ್ನು ಜಾರಿಗೆ ತಂದಿತು. 2006ರಲ್ಲಿ ಆರಂಭವಾದ ಈ ಯೋಜನೆಯ ಮೊತ್ತವು ಕೆಲವು ಫಲಾನುಭವಿಗಳ ಕೈ ಸೇರುವ ಸಮಯ ಸಮೀಪಿಸುತ್ತಿದೆ.
ಬಾಂಡ್ ಮೆಚ್ಯುರಿಟಿ ಆದ ಬಗ್ಗೆ ಲೆಕ್ಕಚಾರ ಆರಂಭವಾಗಿದೆ. ಈ ಬಗ್ಗೆ ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದಾರೆ.
ಟಿವಿ 9 ಕನ್ನಡದ ಜೊತೆ ಮಾತನಾಡಿದ ಅವರು, ‘ಮುಂಚೆ ಅವರು ಭಾಗ್ಯಲಕ್ಷೀ ಅಂತಾ ಘೋಷಣೆ ಮಾಡಿದ್ದರು. ಅದು ಈಗ ಸುಕನ್ಯ ಸಮೃದ್ಧಿ ಯೋಜನೆ ಅಂತಾ ಬದಲಾಗಿದೆ. ಆ ಹೆಸರು ಬದಲಾಗಿದೆ. ಮೊದಲು ಎಲ್‌ಐಸಿ ಅವರು ಇದನ್ನು ಮಾಡುತ್ತಿದ್ದರು. ಭಾಗ್ಯಲಕ್ಷೀ ಬಾಂಡ್ ಅಂತಾ ಎಲ್‌ಐಸಿ ಅವರು ಕೊಡುತ್ತಿದ್ದರು. ಆದರೆ ಈಗ ನಾವು ಪೋಸ್ಟ್ ಆಫೀಸ್‌ನಲ್ಲಿ ಒಂದು ಹೆಣ್ಣು ಮಗು ಜನಿಸಿದ ದಿನದಿಂದ ಹದಿನೆಂಟು ವರ್ಷದ ವರೆಗೆ ವರ್ಷಕ್ಕೆ ಇಂತಿಷ್ಟು ಅಂತಾ ಹಣ ಹಾಕುತ್ತೇವೆ’ ಎಂದರು.
‘ಭಾಗ್ಯಲಕ್ಷೀ ಯೋಜನೆಯೇ ಸುಕನ್ಯ ಸಮೃದ್ಧಿ ಯೋಜನೆ ಅಂತಾ ಹೆಸರು ಬದಲಾಗಿದೆ. ಮೊದಲು ಎಲ್‌ಐಸಿ ಅವರು ಬಾಂಡ್ ಕೊಡುತ್ತಿದ್ದರು. ಈಗ ಪೋಸ್ಟ್ ಆಫೀಸ್‌ನಲ್ಲಿ ಈ ಯೋಜನೆ ಮಾಡಲಾಗುತ್ತಿದೆ. ಮಗುವಿನ 21ನೇ ವಯಸ್ಸಿಗೆ ಹಣ ಕೊಡುತ್ತೇವೆ. ಒಂದು ವೇಳೆ ಆ ಮಗುವಿಗೆ ವಿದ್ಯಾಭ್ಯಾಸಕ್ಕೆ ಬೇಕು ಅಂದರೆ ಹತ್ತೊಂಬತ್ತು ವರ್ಷಕ್ಕೆ ಒಂದುವರೆ ಲಕ್ಷ ರೂಪಾಯಿ ಹಣ ಕೊಡುತ್ತೇವೆ. ಇಲ್ಲಾ 21ನೇ ವಯಸ್ಸಿಗೆ ಒಂದು ಲಕ್ಷದ ಎಂಬತ್ತು ಸಾವಿರದವರೆಗೂ ಆಗುತ್ತದೆ. ಅದನ್ನು ಕೊಡುತ್ತೇವೆ’ ಎಂದು ಹೇಳಿದರು.
‘ನಾನು ಈಗ ಎರಡು ಲಕ್ಷ ಹಣ ನೀಡುವ ಬಗ್ಗೆ ಮಾಹಿತಿ ಪಡೆದುಕೊಂಡೆ. ಯಾರ್ಯಾರದು ಈಗಾಗಲೇ ಭಾಗ್ಯಲಕ್ಷೀ ಬಾಂಡ್ ಮೆಚ್ಯುರಿಟಿ ಆಗಿದೆ ಅವರ ಹಣ ಲೆಕ್ಕಚಾರ ಮಾಡಿ ನೀಡಲು ನಮ್ಮ ಅಧಿಕಾರಿಗಳು ಸನ್ನದ್ಧರಾಗುತ್ತಿದ್ದಾರೆ. ಸರ್ಕಾರದ ಈ ಯೋಜನೆ ಖಂಡಿತಾ ಫಲಾನುಭವಿಗಳಿಗೆ ಸಿಗುವಂತೆ ಮಾಡುತ್ತೇವೆ’ ಎಂದರು.

‘ಸರ್ಕಾರದಿಂದ ಅನೇಕ ಜನಪರ ಯೋಜನೆಗಳು ಬರುತ್ತದೆ. ಅದರ ಲಾಭವನ್ನು ಪಡೆದುಕೊಳ್ಳಿ. ಜೀವನಕ್ಕೆ ಅದರಿಂದ ಸಿಗುವ ಉಪಯೋಗವನ್ನು ಪಡೆದುಕೊಳ್ಳಿ ಎಂದು ಜನರಿಗೆ ಕರೆ ನೀಡಿದ ಸಚಿವರು, ಸರ್ಕಾರಗಳು ಬರುತ್ತವೆ ಹೋಗುತ್ತವೆ ಆದರೆ ಕೆಲವು ಪ್ರಮುಖ ಯೋಜನೆಗಳು, ಜನ ಸಾಮಾನ್ಯರ ಯೋಜನೆಗಳು ಉಳಿಯುತ್ತವೆ. ಇದನ್ನೇ ನಾವು ಮೈಲುಗಲ್ಲು ಎನ್ನುತ್ತೇವೆ’ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
Laxmi News 24×7