ನವದೆಹಲಿ : ಕೇಂದ್ರ ಸರ್ಕಾರವು ಮುಂದಿನ ತಿಂಗಳು ಶೇಕಡಾ 3ರಷ್ಟು ಡಿಎ ಹೆಚ್ಚಳವನ್ನ ಘೋಷಿಸುವ ಸಾಧ್ಯತೆಯಿದೆ. ಸೆಪ್ಟೆಂಬರ್ನಲ್ಲಿ ಈ ಶೇಕಡಾ 3ರಷ್ಟು ಹೆಚ್ಚಳದೊಂದಿಗೆ, ಒಟ್ಟು ತುಟ್ಟಿಭತ್ಯೆ ಶೇಕಡಾ 53ಕ್ಕೆ ತಲುಪುತ್ತದೆ. ಆದಾಗ್ಯೂ, ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ನಿಲ್ಲಿಸಲಾದ ಡಿಎ ಮತ್ತು ತುಟ್ಟಿಭತ್ಯೆ ಪರಿಹಾರ (DR)ಗಾಗಿ 18 ತಿಂಗಳ ಬಾಕಿಯನ್ನ ಸರ್ಕಾರ ಬಿಡುಗಡೆ ಮಾಡುವ ಸಾಧ್ಯತೆಯಿಲ್ಲ.
ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ, ಇಬ್ಬರು ಸದಸ್ಯರು ಇತ್ತೀಚೆಗೆ ಡಿಎ ಬಾಕಿಯ ಬಗ್ಗೆ ಸರ್ಕಾರದ ನಿರ್ಧಾರದ ಬಗ್ಗೆ ಪ್ರಶ್ನೆಗಳನ್ನ ಕೇಳಿದರು. ‘ಕೋವಿಡ್ ಸಮಯದಲ್ಲಿ ತಡೆಹಿಡಿಯಲಾಗಿದ್ದ ಕೇಂದ್ರ ಸರ್ಕಾರಿ ನೌಕರರು / ಪಿಂಚಣಿದಾರರ 18 ತಿಂಗಳ ತುಟ್ಟಿಭತ್ಯೆ / ಪರಿಹಾರವನ್ನ ಬಿಡುಗಡೆ ಮಾಡಲು ಸರ್ಕಾರ ಸಕ್ರಿಯವಾಗಿ ಪರಿಗಣಿಸುತ್ತಿದೆಯೇ’ ಎಂಬ ಪ್ರಶ್ನೆಗೆ, ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ “ಇಲ್ಲ” ಎಂದು ಉತ್ತರಿಸಿದರು.