ಬೆಳಗಾವಿ: ಮಹಾನಗರ ಪಾಲಿಕೆಯ ಬಜೆಟ್‌ನಲ್ಲಿ ಎಲ್ಲ 58 ವಾರ್ಡ್‌ಗಳಿಗೂ ಅನುದಾನ ಸರಿಯಾಗಿ ಹಂಚಿಕೆ ಆಗಿಲ್ಲ ಎಂದು ಆರೋಪಿಸಿ ಪ್ರತಿಪಕ್ಷ ನಾಯಕರು, ಆಡಳಿತಾರೂಢ ಪಕ್ಷವನ್ನು ತರಾಟೆ ತೆಗೆದುಕೊಂಡರು. ಆಯ್ದ 37 ವಾರ್ಡ್ ಸದಸ್ಯರಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ತಾರತಮ್ಯ ಎಸಗಲಾಗಿದೆ ಎಂದೂ ಆಕ್ಷೇಪ ವ್ಯಕ್ತಪಡಿಸಿದರು.
ಮೇಯರ್ ಸವಿತಾ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಶನಿವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ಕೆಲಕಾಲ ಬಿಸಿ ಚರ್ಚೆ ನಡೆಯಿತು. 2022-23ನೇ ಸಾಲಿನ ಬಜೆಟ್ ಸಂಬಂಧಿಸಿ ಸರಿಯಾದ ಮಾಹಿತಿ ನೀಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂಬ ವಿಷಯ ತೀವ್ರ ಚರ್ಚೆಗೆ ಗ್ರಾಸವಾಯಿತು. ಇದರಿಂದ ಪರಿಷತ್ ಸಭೆಯನ್ನು ಮಧ್ಯಾಹ್ನದ ವೇಳೆಗೆ ಮುಂದೂಡಲಾಯಿತು.
‘ಪಾಲಿಕೆಯ 58 ವಾರ್ಡ್‌ಗಳಿಗೂ ಬಜೆಟ್ ಸರಿಯಾಗಿ ಹಂಚಿಕೆ ಆಗಬೇಕು’ ಎಂದು ವಿಪಕ್ಷ ನಾಯಕ ಮುಜಮಿಲ್ ಡೋಣಿ ಪಟ್ಟು ಹಿಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ನಾಯಕ ಗಿರೀಶ ಧೋಂಗಡಿ, ‘ಮೊದಲು ಸಭೆಯ ಅಜೆಂಡಾ ಪ್ರಕಾರ ಚರ್ಚೆ ನಡೆಸಬೇಕು. ನಂತರದಲ್ಲಿ ಅಭಿವೃದ್ಧಿ ಅನುದಾನದ ಬಗ್ಗೆ ಚರ್ಚಿಸೋಣ. ಈಗ ಯಾವುದೇ ಕಾರಣಕ್ಕೂ ಇದನ್ನು ಚರ್ಚೆ ಮಾಡುವುದು ಬೇಡ’ ಎಂದರು.
ಈ ವೇಳೆ ಎರಡೂ ಸದಸ್ಯರ ಮಧ್ಯೆ ವಾಗ್ವಾದ ನಡೆಯಿತು. ನಂತರ ವಿಪಕ್ಷ ಸದಸ್ಯರು ಬಜೆಟ್ ಅನುದಾನ ಹಂಚಿಕೆಯ ಬಗ್ಗೆ ಚರ್ಚೆ ಆಗಬೇಕು ಎಂದು ಪಟ್ಟು ಹಿಡಿದರು. ಅಭಿವೃದ್ಧಿ ವಿಷಯದಲ್ಲಿ ಎಲ್ಲರೂ ಚರ್ಚೆಯಲ್ಲಿ ಭಾಗವಹಿಸಬೇಕು ಎಂದರು.