ಬೆಂಗಳೂರು, (ಆಗಸ್ಟ್ 16): ಮೈಸೂರು ಪಾದಯಾತ್ರೆಗೆ ಸೆಡ್ಡು ಹೊಡೆದು ರೆಬೆಲ್ ಟೀಂ ಪ್ರತ್ಯೇಕ ಪಾದಯಾತ್ರೆ ಮಾಡುವುದಕ್ಕೆ ಸರ್ಕಸ್ ಮಾಡುತ್ತಿದೆ.
ಕಳೆದ ವಾರವಷ್ಟೇ ಬೆಳಗಾವಿಯಲ್ಲಿ ಬಿಜೆಪಿ ಸಮಾನ ಮನಸ್ಕರ ತಂಡೆ ಸಭೆ ಸೇರುವ ಮೂಲಕ ಶಕ್ತಿ ಪ್ರದರ್ಶನ ಮಾಡಿದ್ದರು. ಇದೀಗ ಮತ್ತೆ ಸಭೆ ಸೇರುವುದಕ್ಕೆ ಆಗಸ್ಟ್ 21ರಂದು ಬೆಂಗಳೂರಿನಲ್ಲಿ ನಿರ್ಧರಿಸಿದ್ದರು.
ಅನಿವಾರ್ಯ ಕಾರಣದಿಂದ ಸಭೆಯೂ ಮುಂದೂಡಿಕೆಯಾಗಿದ್ದು, ಇದೀಗ ಎಲ್ಲರ ಚಿತ್ತ ಇದೀಗ ಹೈಕಮಾಂಡ್ನತ್ತ ನೆಟ್ಟಿದೆ.
ಪಾದಯಾತ್ರೆಯನ್ನು ಮುಂದಿಟ್ಟುಕೊಂಡು ರಾಜ್ಯ ಬಿಜೆಪಿ ನಾಯಕತ್ವದ ವಿರುದ್ಧ ಸಭೆಗಳಲ್ಲಿ ತೊಡಗಿರುವ ಬಿಜೆಪಿ ಮುಖಂಡರು, ಈಗ ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದಾರೆ.
ಹೀಗಾಗಿ ಆಗಸ್ಟ್ 21ರಂದು ಬೆಂಗಳೂರಿನಲ್ಲಿ ನಡೆಸುವುದಕ್ಕೆ ಪ್ಲ್ಯಾನ್ ಮಾಡಿದ್ದ 3ನೇ ಸಭೆ ಮುಂದೂಡಿಕೆಯಾಗಿದೆ.
ಈ ಮಧ್ಯೆ ಸಭೆಯ ನೇತೃತ್ವ ವಹಿಸಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮುಂದಿನ ವಾರ ನವದೆಹಲಿಗೆ ತೆರಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಸಂತೋಷ್ರಿಂದ ಬುಲಾವ್ ಮೇರೆಗೆ ಶಾಸಕ ರಮೇಶ್ ಜಾರಕಿಹೊಳಿ ಮುಂದಿನ ವಾರ ದೆಹಲಿಗೆ ತೆರಳಲಿದ್ದು, ಆಪ್ತರ ಪ್ರಕಾರ ಆಗಸ್ಟ್ 19 ರಂದೇ ಹೈಕಮಾಂಡ್ ನಾಯಕರನ್ನ ಭೇಟಿ ಆಗಲಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಶಾಸಕರಾದ ರಮೇಶ್ ಜಾರಕಿಹೊಳಿ, ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಪ್ರತಾಪ್ ಸಿಂಹ ಸೇರಿ ಹಲವರು ಪ್ರಯಾಣ ಮಾಡೋ ಸಾಧತೆ ಇದೆ ಎನ್ನಲಾಗಿದ್ದು, ಮಾತುಕತೆ ನಡೆಸಿ ಪ್ರತ್ಯೇಕ ಪಾದಯಾತ್ರೆ ವಿವಾದ ಪರಿಹರಿಸುವ ಸಾಧ್ಯತೆಯೂ ಇದೆ.
ಇನ್ನು ಆಗಸ್ಟ್ 21ರಂದು ಬೆಂಗಳೂರಿನಲ್ಲಿ ನಡೆಯಬೇಕಿದ್ದ ಸಭೆ ತಾತ್ಕಾಲಿಕ ಮುಂದೂಡಿಕೆಯಾಗಿದೆ.