ಚಿಂಚೋಳಿ: ತಾಲ್ಲೂಕಿನಲ್ಲಿ ವಿವಿಧೆಡೆ ಸರ್ಕಾರಿ ಶಾಲೆಗಳು ಸೋರುತ್ತಿದ್ದು ಅಪಾಯದ ಸ್ಥಿತಿಯಲ್ಲಿವೆ. ಕೆಲವು ಶಾಲೆಗಳ ಛತ್ತಿನ ಪ್ಲಾಸ್ಟರ್ ಕಿತ್ತು ಬೀಳುತ್ತಿದ್ದು ಮಕ್ಕಳು ಹೆದರಿಕೆಯಲ್ಲಿಯೇ ಪಾಠ ಪ್ರವಚನ ಆಲಿಸುವಂತಾಗಿದೆ.
ತಾಲ್ಲೂಕಿನಲ್ಲಿ 298 ಸರ್ಕಾರಿ ಶಾಲೆಗಳಿವೆ.
ಇಲ್ಲಿ 28,340 ಮಕ್ಕಳ ದಾಖಲಾತಿಯಿದೆ. ಇವರಿಗೆ ಪಾಠ ಪ್ರವಚನ ನಡೆಸಲು ಒಟ್ಟು 2,073 ಶಾಲಾ ಕೊಠಡಿಗಳಿದ್ದು, ಈ ಪೈಕಿ 1,200 ಕೊಠಡಿಗಳು ಸುಸ್ಥಿತಿಯಲ್ಲಿವೆ. 308 ಶಿಥಿಲ ಕೊಠಡಿಗಳು ಸೇರಿ 563 ಕೊಠಡಿಗಳು ಅಪಾಯದಲ್ಲಿವೆ. 255 ಕೊಠಡಿಗಳಿಗೆ ಭಾರಿ ದುರಸ್ತಿಯ ಅಗತ್ಯವಿದ್ದು, ಇದಲ್ಲದೇ 310 ಕೊಠಡಿಗಳು ಚಿಕ್ಕಪುಟ್ಟ ದುರಸ್ತಿಗಾಗಿ ಕಾಯುತ್ತಿವೆ.
118 ಶಾಲೆಗಳಲ್ಲಿ ಅಕ್ಷರ ದಾಸೋಹದ ಮಧ್ಯಾಹ್ನದ ಬಿಸಿಯೂಟದ ಅಡುಗೆ ತಯಾರಿಗೆ ಪ್ರತ್ಯೇಕ ಕೊಠಡಿಯಿಲ್ಲ. 125 ಬಾಲಕಿಯರ ಮತ್ತು 126 ಬಾಲಕರ ಮತ್ತು 72 ಅಂಗವಿಕಲರಿಗೆ ಸೇರಿ ಒಟ್ಟು 323 ಶೌಚಾಲಯಗಳ ಬೇಡಿಕೆಯಿದೆ.
ಪ್ರಾಥಮಿಕ ಮತ್ತು ಪ್ರೌಢ ಶಾಲೆ ಸೇರಿ 50 ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್ ಸೌಲಭ್ಯವಿದೆ. ಬಹುತೇಕ ಪ್ರೌಢ ಶಾಲೆಗಳಲ್ಲಿ ಆಟದ ಮೈದಾನದ ಸಮಸ್ಯೆಯಿಲ್ಲ. ಆದರೆ ಪ್ರಾಥಮಿಕ ಶಾಲೆಗಳಲ್ಲಿ ಕ್ರೀಡಾಂಗಣಗಳ ಕೊರತೆಯಿದೆ.
ಹೊಸದಾಗಿ 66 ಕೊಠಡಿಗಳ ನಿರ್ಮಾಣ ನಡೆಯುತ್ತಿದೆ. ಇದರ ಜತೆಗೆ 157 ಶಾಲೆಗಳಲ್ಲಿ ಹೊಸ ಕೊಠಡಿಗಳ ಅತಿ ಅಗತ್ಯವಿದೆ. 141 ಶಾಲೆಗಳಲ್ಲಿ ಹೊಸ ಕೊಠಡಿಗಳ ಅಗತ್ಯವಿಲ್ಲ. ತಾಲ್ಲೂಕಿನ ಹೊಡೇಬೀರನಹಳ್ಳಿ, ಹೂವಿನಭಾವಿ, ಕರ್ಚಖೇಡ, ರುಸ್ತಂಪುರ, ನೀಮಾಹೊಸಳ್ಳಿ, ಯಲಮಾಮಡಿ, ಶಿರೋಳ್ಳಿ, ಕಲ್ಲೂರು ರೋಡ್, ಐನೋಳ್ಳಿ ಮೊದಲಾದ ಕಡೆ ಶಿಥಿಲ ಕಟ್ಟಡ ಗೋಚರಿಸುತ್ತವೆ.