ಬೆಂಗಳೂರು,ಆ.13- ಮನೆಯೊಂದು ಮೂರು ಬಾಗಿಲು! ಹೌದು, ಇದು ಸದ್ಯ ರಾಜ್ಯ ಬಿಜೆಪಿಯ ಪರಿಸ್ಥಿತಿ. ರಾಜ್ಯ ಸರ್ಕಾರದ ವಿರುದ್ಧ ಪಾದಯಾತ್ರೆ, ಹೋರಾಟದ ಉತ್ಸಾಹ ಕಮಲ ಪಾಳಯದಲ್ಲಿ ಮೇಲ್ನೋಟಕ್ಕೆ ಕಾಣಸಿಕ್ಕರೂ, ಆಂತರಿಕವಾಗಿ ಬಿಜೆಪಿ ಒಡೆದ ಮನೆಯಾಗಿದೆ.
ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಟೀಂ ಒಂದು ಕಡೆಯಾದರೆ, ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣ ಮತ್ತೊಂದು ಕಡೆ.
ಇದೆಲ್ಲವನ್ನೂ ಮೀರಿ ಸಂಘ ನಿಷ್ಠ ಅಥವಾ ಹೈಕಮಾಂಡ್ ನಿಷ್ಠ ಬಣ ಮಗದೊಂದು ಕಡೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಯ್ಕೆ ಸಂದರ್ಭದಲ್ಲೇ ಭುಗಿಲೆದ್ದ ಅಸಮಾಧಾನ ಇನ್ನೂ ಆರಿಲ್ಲ. ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿಯೇ ಗುಡುಗಿದ್ದರು. ಅವರಿಗೆ ಸಾಥ್ ನೀಡಿದವರು ವಲಸೆ ಶಾಸಕ ರಮೇಶ್ ಜಾರಕಿಹೊಳಿ.
ಸದ್ಯ ಈ ತಂಡ ವಿಸ್ತರಣೆಯಾಗುತ್ತಿದೆ. ಮಾಜಿ ಸಂಸದ ಪ್ರತಾಪ ಸಿಂಹ, ಕುಮಾರ ಬಂಗಾರಪ್ಪ, ಶಾಸಕ ಬಿಪಿ ಹರೀಶ್ ಕೂಡಾ ಸೇರ್ಪಡೆಯಾಗಿದ್ದಾರೆ. ಈ ಭಿನ್ನ ರಾಗಕ್ಕೆ ವಿಧಾನಸಭೆ ಉಪ ನಾಯಕ ಅರವಿಂದ ಬೆಲ್ಲದ ಪರೋಕ್ಷ ಬೆಂಬಲ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ವಿರುದ್ಧದ ಹೋರಾಟ ಹಾಗೂ ಪಾದಯಾತ್ರೆಯಲ್ಲಿ ಉತ್ಸಾಹದಲ್ಲಿದ್ದ ಬಿಜೆಪಿಗೆ ಒಳಬೇಗುದಿಯೇ ಬಹುದೊಡ್ಡ ಸವಾಲಾಗಿದೆ. ಪಾದಯಾತ್ರೆಯಲ್ಲಿ ಬಿ.ವೈ.ವಿಜಯೇಂದ್ರಗೆ ಒಂದಿಷ್ಟು ರಾಜಕೀಯ ಲಾಭವಾದರೂ ಅದನ್ನು ಗಟ್ಟಿಗೊಳಿಸಲು ಪಕ್ಷದಲ್ಲಿರುವ ಬಂಡಾಯಗಾರರು ಅವಕಾಶ ಕೊಡುತ್ತಿಲ್ಲ