ಬೆಂಗಳೂರು,ಆ.13- ಬಡವರ ಹಸಿವು ನೀಗಿಸುತ್ತಿರುವ ಇಂದಿರಾ ಕ್ಯಾಂಟಿನ್‌ಗಳಿಗೆ ಡಿಜಿಟಲ್ ಸ್ಪರ್ಶ ನೀಡಲು ಬಿಬಿಎಂಪಿ ಮುಂದಾಗಿದೆ.ಇನ್ನು ಮುಂದೆ ಟಚ್ ಸ್ಕ್ರೀನ್ ಮೂಲಕ ತಿಂಡಿ ಬುಕ್ಕಿಂಗ್ ಮಾಡಲು ಇಂದಿರಾ ಕ್ಯಾಂಟಿನ್‌ಗಳಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತಿದೆ. ಪ್ರಾಥಮಿಕ ಹಂತದಲ್ಲಿ ರಾಜರಾಜೇಶ್ವರಿನಗರ ವಲಯದ 11 ಕ್ಯಾಂಟೀನ್‌ಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ.
ಸಾಧಕ ಬಾಧಕ ಅಧ್ಯಯನದ ಬಳಿಕ 169 ಇಂದಿರಾ ಕ್ಯಾಂಟೀನ್ ಗೂ ಡಿಜಿಟಲ್ ಸ್ಪರ್ಶ ನೀಡಲು ತೀರ್ಮಾನಿಸಲಾಗಿದೆ. ಎಷ್ಟು ತಿಂಡಿ, ಎಷ್ಟು ಊಟ ಖರ್ಚಾಯ್ತು? ಗುಣಮಟ್ಟ ಹೇಗಿದೆ ? ಎಂಬಿತ್ಯಾದಿ ಪ್ರಶ್ನೆಗಳಿಗೆಲ್ಲಾ ಡಿಜಿಟಲ್ ಸ್ಪರ್ಶದಿಂದ ಉತ್ತರ ಸಿಗಲಿದೆ. ಇಂದಿರಾ ಕ್ಯಾಂಟೀನ್ ಬಗೆಗಿರುವ ದೂರುಗಳನ್ನು ಈ ಮೂಲಕ ಕಡಿಮೆ ಮಾಡುವ ಉದ್ದೇಶದಿಂದ ಇಂತಹ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸೆಲ್ ಕಿಯೊಸ್ಕ್ ಯಂತ್ರದಲ್ಲಿ ಊಟದ ಮೆನು ಸೇರಿ ಯೋಜನೆಯ ಎಲ್ಲಾ ಮಾಹಿತಿ ಮೊದಲೇ ಪ್ರೋಗ್ರಾಮಿಂಗ್ ಮಾಡಲಾಗುತ್ತೆ. ಊಟವನ್ನು ಪಡೆಯಲು ಆಪರೇಟ್ ಮಾಡುವಾಗ ಗ್ರಾಹಕನ ಫೋಟೋ ಕ್ಲಿಕ್ಕಿಸುತ್ತೆ. ಒಬ್ಬ ವ್ಯಕ್ತಿಗೆ ಎಷ್ಟು ಊಟ ಕೊಡಬೇಕು ಅನ್ನೋದು ಮೊದಲೇ ನಮೂದು ಆಗಿರುತ್ತೆ.
ಬೆಳಗ್ಗೆ ಉಪಾಹಾರ, ಮಧ್ಯಾಹ್ನ, ರಾತ್ರಿ ಊಟದ ಸಮಯದಲ್ಲಿ ಮಾತ್ರ ಇದು ಕಾರ್ಯಾಚರಣೆ ಮಾಡುತ್ತೆ. ಒಂದು ದಿನಕ್ಕೆ ಎಷ್ಟು ಊಟ ಮಾರಾಟವಾಗಿದೆ ಎನ್ನವುದರ ಜೊತೆಗೆ ಊಟದ ಗುಣಮಟ್ಟವನ್ನೂ ಯಂತ್ರ ತೋರಿಸಲಿದೆ.