ಬೆಂಗಳೂರು: ನಗರದ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ. 1 ಮತ್ತು 2ರಲ್ಲಿ ₹ 10 ಸಾವಿರ ಕೋಟಿಗೂ ಹೆಚ್ಚು ಮೌಲ್ಯದ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಮರಳಿ ಪಡೆಯಲು ಕ್ರಮ ವಹಿಸುವಂತೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚನೆ ನೀಡಿದ್ದಾರೆ.
ಈ ಕುರಿತು ಟಿಪ್ಪಣಿ ಕಳುಹಿಸಿರುವ ಸಚಿವರು, ‘ಅರಣ್ಯ ನಿಯಮಾವಳಿ 1878ರ ಸೆಕ್ಷನ್ 9ರಡಿಯಲ್ಲಿ ಅರಣ್ಯ ಎಂದು ಘೋಷಣೆಯಾಗಿ, ಮೈಸೂರು ಮಹಾರಾಜರ ಆಳ್ವಿಕೆಯ ಕಾಲದಲ್ಲಿ, ಅಂದರೆ 1896 ಜೂನ್ 11ರಲ್ಲೇ ಗೆಜೆಟ್ ಅಧಿಸೂಚನೆ ಆಗಿರುವ ಸಾವಿರಾರು ಕೋಟಿ ಬೆಲೆಯ ಭೂಮಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಎಚ್‌ಎಂಟಿ ಸಂಸ್ಥೆ ಅಕ್ರಮವಾಗಿ ಸರ್ಕಾರಿ ಇಲಾಖೆಗಳು, ವಿವಿಧ ಸಂಸ್ಥೆಗಳು ಮತ್ತು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. ಒಟ್ಟು 599 ಎಕರೆ ಅರಣ್ಯ ಭೂಮಿಯ ಪೈಕಿ ಎಚ್‌ಎಂಟಿಗೆ ನೀಡಲಾಗಿದೆ ಎನ್ನಲಾದ 469 ಎಕರೆ 32 ಗುಂಟೆಯಲ್ಲಿ ಖಾಲಿ ಇರುವ 281 ಎಕರೆಯನ್ನು ತಕ್ಷಣ ವಶಕ್ಕೆ ಪಡೆಯಬೇಕು. ನಂತರ ಉಳಿದ ಭೂಮಿ ವಶಕ್ಕೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.