ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಕನಕೂರ, ಚಂದನಮಟ್ಟಿ ಹಾಗೂ ತಲವಾಯಿ ಗ್ರಾಮಗಳ ಬಳಿ ಸಾಗಿದರೆ ಸುಗಂಧರಾಜ ಹೂವಿನ ಘಮಲು ಹಿತಾನುಭವ ನೀಡುತ್ತದೆ. ಇಲ್ಲಿನ ರೈತರು ಸುಗಂಧರಾಜ ಹೂವು ಬೆಳೆಯುವ ಮೂಲಕ, ಜೀವನ ನಿರ್ವಹಣೆ ಮಾರ್ಗ ಕಂಡುಕೊಂಡಿದ್ದಾರೆ.
ಹತ್ತು ವರ್ಷಗಳಿಂದ ಸುಗಂಧರಾಜ ಹೂವಿನ ಕೃಷಿ ನಡೆಸುತ್ತಿರುವ ರೈತರು, ಈ ಭಾಗದ ಪುಷ್ಪಕೃಷಿಗೆ ಹೊಸ ಆಯಾಮ ನೀಡಿದ್ದಾರೆ.
ಜಮೀನಿನ ಫಲವತ್ತತೆ ಕಾಪಾಡಲು ಸಗಣಿ ಗೊಬ್ಬರ ಬಳಸುತ್ತಾರೆ. ಇದರಿಂದ ಬೆಳೆ ಸಮೃದ್ಧವಾಗಿ, ಗಿಡದ ತುಂಬ ಹೂವು ಅರಳಲು ಸಾಧ್ಯವಾಗುತ್ತದೆ. ತಿಂಗಳಿಗೊಮ್ಮೆ ಕಳೆನಾಶಕ, ಔಷಧ ಸಿಂಪಡನೆ, ಡಿ.ಎ.ಪಿ ಹಾಗೂ ಯೂರಿಯಾ ಗೊಬ್ಬರ ಬೆರೆಸಿ ಜಮೀನಿನ ತುಂಬ ಚೆಲ್ಲುತ್ತಾರೆ.
‘ಸುಗಂಧರಾಜ ಹೂವು ಕೆ.ಜಿ.ಗೆ ₹35ರಿಂದ ₹40ರವರೆಗೆ ಮಾರಾಟ ವಾಗುತ್ತವೆ. ಶ್ರಾವಣ ಮಾಸದಲ್ಲಿ ₹100 ರಿಂದ ₹200ರವರೆಗೆ ಮಾರಾಟ ವಾಗುತ್ತವೆ. ಹುಬ್ಬಳ್ಳಿ ಮತ್ತು ಧಾರವಾಡ ಶಹರಕ್ಕೆ ಗೂಡ್ಸ್ ವಾಹನ ಇಲ್ಲವೇ ದ್ವಿಚಕ್ರ ವಾಹನದಲ್ಲೇ ಮಾರಾಟಕ್ಕೆ ಕಳಿಸಲಾಗುತ್ತದೆ’ ಎಂದು ರೈತ ಮಹಿಳೆ ಶರೀಫಾಬಾನು ನದಾಫ ಹೇಳಿದರು.
‘ಈ ಬೆಳೆ ನೀರಿನ್ಯಾಗಿನ ಮೀನ ಇದ್ದಂಗ. ಇದಕ್ಕೆ ಎರಡ್ಮೂರು ದಿನಕ್ಕೊಮ್ಮೆ ನೀರುಣಿಸಬೇಕು. ನಾಟಿಯ ನಿರುಪಯುಕ್ತ ದೇಟು ಕೊಯ್ದು ದನಗಳಿಗೆ ತಿನ್ನಲು ಹಾಕ್ತೇವೆ. ಉತ್ತಮ ಇಳುವರಿ, ಒಳ್ಳೇ ಆದಾಯಕ್ಕೆ ಈ ಪುಷ್ಪಕೃಷಿ ಸೂಕ್ತ’ ಎಂದು ಕನಕೂರ ಗ್ರಾಮದ ರೈತ ಪ್ರಕಾಶ ಮಾಳನ್ನವರ ಮಾಹಿತಿ ನೀಡಿದರು.