ಗುಡ್ಡಾಪುರ (ಮಹಾರಾಷ್ಟ್ರ): ಮಹಾರಾಷ್ಟ್ರ ರಾಜ್ಯದ ಸಾಂಗಲಿ ಜಿಲ್ಲೆಯ ಜತ್ತ ತಾಲ್ಲೂಕಿನ ಶ್ರೀ ಕ್ಷೇತ್ರ ಗುಡ್ಡಾಪುರದಲ್ಲಿ ಕರ್ನಾಟಕ ಸರ್ಕಾರದ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯಿಂದ ₹10.96 ಕೋಟಿ ಅನುದಾನದಲ್ಲಿ ನಿರ್ಮಿಸಲಾಗಿರುವ ‘ಕರ್ನಾಟಕ ಭವನ’ವನ್ನು ಗುರುವಾರ ಲೋಕಾರ್ಪಣೆ ಮಾಡಲಾಯಿತು.
‘ಕರ್ನಾಟಕ ಭವನ’ ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವೆ ಶಶಿಕಲಾ ಜೊಲ್ಲೆ, 12ನೇ ಶತಮಾನದಲ್ಲೇ ಬಸವಣ್ಣ ಮಹಿಳೆಯರಿಗೆ ಆದ್ಯತೆ ನೀಡಿದ್ದರು. ಅಕ್ಕಮಹಾದೇವಿ, ದಾನಮ್ಮ ದೇವಿ ಅವರಲ್ಲಿ ಮುಖ್ಯರಾಗಿದ್ದಾರೆ.
ದಾನಮ್ಮ ದೇವಿ ದರ್ಶನಕ್ಕೆ ಉತ್ತರ ಕರ್ನಾಟಕದ ಮಹಿಳೆಯರು ಪಾದಯಾತ್ರೆ ಮೂಲಕ ಪ್ರತಿವರ್ಷ ಭೇಟಿ ನೀಡಿ ದರ್ಶನ ಪಡೆಯುವುದು ವಿಶೇಷವಾಗಿದೆ ಎಂದರು. ಮುಜರಾಯಿ ಸಚಿವೆಯಾಗಿದ್ದಾಗ ದೇವಿಯ ಸೇವೆ ಮಾಡುವ ಅವಕಾಶ ಲಭಿಸಿತ್ತು. ಎರಡು ಎಕರೆ ಭೂಮಿಯಲ್ಲಿ ₹10.96 ಲಕ್ಷವನ್ನು ಕರ್ನಾಟಕ ಭವನಕ್ಕೆ ಮಂಜೂರು ಮಾಡಿದೆ ಎಂದರು.
ಕರ್ನಾಟಕ ಭವನದಲ್ಲಿ ಏಕಕಾಲಕ್ಕೆ ಒಂದು ಸಾವಿರ ಜನ ಕುಳಿತುಕೊಳ್ಳುವ, ದಾಸೋಹ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.
ರಾಜ್ಯದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ನೆರೆ ರಾಜ್ಯಗಳಲ್ಲಿರುವ ಪ್ರಮುಖ ಯಾತ್ರಾ ಸ್ಥಳಗಳಾದ ಪಂಢರಪುರ, ತುಳಜಾಪುರ, ಮಂತ್ರಾಲಯ, ಶಬರಿಮಲೆಯಲ್ಲಿ ಕರ್ನಾಟಕದ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಾಣಕ್ಕೆ ನಾನು ಮುಜರಾಯಿ ಇಲಾಖೆ ಸಚಿವೆಯಾಗಿದ್ದಾಗ ಅನುದಾನ ನೀಡಿದ್ದು, ನಿರ್ಮಾಣ ಹಂತದಲ್ಲಿವೆ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಶ್ರೀ ದಾನಮ್ಮ ದೇವಿ ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ವಿಜುಗೌಡ ಪಾಟೀಲ, ₹60 ಕೋಟಿ ವೆಚ್ಚದಲ್ಲಿ ದಾನಮ್ಮ ದೇವಿ ದೇವಸ್ಥಾನವನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.