ಬೆಳಗಾವಿ: ‘ಕರ್ಮ, ಅಕರ್ಮ ಮತ್ತು ವಿಕರ್ಮದ ಬಗ್ಗೆ ನಾವು ಸದಾ ಜಾಗೃತರಾಗಬೇಕು. ಯಾವ ಕರ್ಮ ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು’ ಎಂದು ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಹೇಳಿದರು.
ಇಲ್ಲಿನ ಅಕಾಡೆಮಿ ಆಫ್ ಕಂಪೇರೆಟಿವ್ ಫಿಲಾಸಫಿ ಆಯಂಡ್ ರಿಲೀಜನ್ (ಎಸಿಪಿಆರ್)ನ ಶತಮಾನೋತ್ಸವಕ್ಕೆ ಚಾಲನೆ ಹಾಗೂ ಗುರುದೇವ ರಾನಡೆ ರಚಿಸಿದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಬದುಕಿನಲ್ಲಿ ಪ್ರತಿಯೊಬ್ಬರಿಗೂ ಜ್ಞಾನ ಮತ್ತು ಭಕ್ತಿ ಅಗತ್ಯ. ರಾಮ ಮತ್ತು ರಾವಣ ಇಬ್ಬರಿಗೂ ಜ್ಞಾನವಿತ್ತು. ಆದರೆ, ರಾಮನಲ್ಲಿ ಮಾತ್ರ ಭಕ್ತಿ ಇದ್ದಿದ್ದರಿಂದ ಇಂದಿಗೂ ಅವನನ್ನು ಪೂಜಿಸುತ್ತೇವೆ. ಭಕ್ತಿ ಇಲ್ಲದ ಜ್ಞಾನ ನಮ್ಮಲ್ಲಿ ಅಹಂಕಾರ ತರುತ್ತದೆ’ ಎಂದರು.
‘ಸಂಪ್ರದಾಯ ಸರಿಯಾದ ಪಥದಲ್ಲಿ ಕರೆದೊಯ್ಯುತ್ತದೆ. ಇದು ಸಾಧನೆಯ ಮಾರ್ಗವೂ ಆಗಿದೆ. ಪ್ರವಚನಗಳು ನಾವು ಗಮ್ಯಸ್ಥಾನ ತಲುಪಲು ಮಾರ್ಗದರ್ಶನ ನೀಡುತ್ತವೆ. ಒಂದುವೇಳೆ ಗಮ್ಯಸ್ಥಾನವನ್ನೇ ಮರೆತರೆ, ನಮ್ಮನ್ನು ನಾವು ಕಳೆದುಕೊಳ್ಳುತ್ತೇವೆ. ಹಾಗಾಗಿ ಪ್ರತಿಯೊಬ್ಬರೂ ಸಂಪ್ರದಾಯ ಪಾಲಿಸಿ’ ಎಂದು ಕರೆ ನೀಡಿದರು.