ನವದೆಹಲಿ: ದೆಹಲಿ ಅಬಕಾರಿ ನೀತಿ ಹಗರಣದ ತನಿಖೆಯನ್ನು ಪೂರ್ಣಗೊಳಿಸಿರುವ ಸಿಬಿಐ ಅಧಿಕಾರಿಗಳು, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹಾಗೂ ಎಎಪಿ ಶಾಸಕ ದುರ್ಗೇಶ್ ಪಾಠಕ್ ಸೇರಿದಂತೆ ಐವರ ವಿರುದ್ಧ ಅಂತಿಮ ದೋಷಾರೋಪ ಪಟ್ಟಿಯನ್ನು ಸೋಮವಾರ ಸಲ್ಲಿಸಿದ್ದಾರೆ.
ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ತೆಲಂಗಾಣದ ವಿಧಾನ ಪರಿಷತ್ ಸದಸ್ಯೆ ಕೆ.
ಕವಿತಾ ಹಾಗೂ 15 ಮಂದಿ ಇತರರ ವಿರುದ್ಧ ಸಿಬಿಐ ಅಧಿಕಾರಿಗಳು ಈ ಹಿಂದೆ ಒಂದು ಮುಖ್ಯ ದೋಷಾರೋಪ ಪಟ್ಟಿ ಹಾಗೂ ನಾಲ್ಕು ಪೂರಕ ದೋಷಾರೋಪ ಪಟ್ಟಿಗಳನ್ನು ಸಲ್ಲಿಸಿದ್ದರು.
ಸೋಮವಾರ ಸಲ್ಲಿಕೆಯಾಗಿರುವುದು ಅಂತಿಮ ದೋಷಾರೋಪ ಪಟ್ಟಿ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಕೇಜ್ರಿವಾಲ್, ಪಾಠಕ್, ಅರಬಿಂದೊ ಫಾರ್ಮಾ ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕ ಪಿ. ಶರತ್ ಚಂದ್ರ ರೆಡ್ಡಿ, ಬಡಿ ರಿಟೇಲ್ ಪ್ರೈ.ಲಿ. ಕಂಪನಿಯ ನಿರ್ದೇಶಕ ಅಮಿತ್ ಅರೋರಾ, ಹಣದ ಅಕ್ರಮ ವರ್ಗಾವಣೆಯಲ್ಲಿ ತೊಡಗಿರುವ ವ್ಯಕ್ತಿ ಎನ್ನಲಾದ ವಿನೋದ್ ಚೌಹಾಣ್, ಉದ್ಯಮಿ ಆಶಿಷ್ ಮಾಥುರ್ ಅವರನ್ನು ಆರೋಪಿಗಳು ಎಂದು ದೋಷಾರೋಪ ಪಟ್ಟಿಯಲ್ಲಿ ಹೆಸರಿಸಲಾಗಿದೆ.