ನವದೆಹಲಿ: ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಯುವಕರು, ರೈತರು, ಮಹಿಳೆಯರು ಮತ್ತು ಸಣ್ಣ ಉದ್ಯಮಗಳ ಸುತ್ತ ಚಕ್ರವ್ಯೂಹವನ್ನು (ಮಹಾಭಾರತದ ಮಹಾಕಾವ್ಯದಲ್ಲಿ ಉಲ್ಲೇಖಿಸಿರುವ ಯುದ್ಧ ರಚನೆ) ರಚಿಸುತ್ತಿದೆ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೋಮವಾರ(ಜುಲೈ 29) ಆರೋಪಿಸಿದ್ದಾರೆ.
ಸದನವನ್ನು ಉದ್ದೇಶಿಸಿ ಮಾತನಾಡಿದ ಅವರು, ಕಮಲ (ಬಿಜೆಪಿಯ ಚಿಹ್ನೆ) ರಚನೆಯ ಕೇಂದ್ರದಲ್ಲಿ ನರೇಂದ್ರ ಮೋದಿ, ಅಮಿತ್ ಷಾ, ಮೋಹನ್ ಭಾಗವತ್, ಅಜಿತ್ ದೋವಲ್, ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಆರು ಜನರು ಇದ್ದಾರೆ. ಸಾವಿರಾರು ವರ್ಷಗಳ ಹಿಂದೆ, ಕುರುಕ್ಷೇತ್ರದ ಚಕ್ರವ್ಯೂಹದಲ್ಲಿ ಅಭಿಮನ್ಯುವನ್ನು ಆರು ಜನರು ಕೊಂದರು. ಚಕ್ರವ್ಯೂಹದೊಳಗೆ ಭಯದ ಸ್ಥಿತಿಯಿದ್ದು, ಅಭಿಮನ್ಯುವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿ ಆರು ಜನರು ಕೊಂದಿದ್ದಾರೆ. ನಾನು ಸ್ವಲ್ಪ ಸಂಶೋಧನೆ ಮಾಡಿದ್ದೇನೆ. ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯುತ್ತಾರೆ. ಅದು ಕಮಲದ ಆಕಾರದಲ್ಲಿದೆ ಎಂದು ಅಧ್ಯಯನದ ನಂತರ ತಿಳಿಯಿತು ಎಂದು ರಾಹುಲ್ ಹೇಳಿದರು.