ಬೆಳಗಾವಿ: ನಗರದ ಕ್ಯಾಂಟೋನ್ಮೆಂಟ್‌ನ ವಸತಿ ಪ್ರದೇಶವನ್ನು ಮಹಾನಗರ ಪಾಲಿಕೆಯಲ್ಲಿ ಸೇರಿಸುವುದಕ್ಕೆ ಸಂಬಂಧಿಸಿದಂತೆ ಕ್ಯಾಂಟೋನ್ಮೆಂಟ್ ಬೋರ್ಡ್‌ನ ಒಟ್ಟು 1763.78 ಎಕರೆ ಜಾಗೆಯ ಸಮೀಕ್ಷೆ ಕೈಗೊಂಡು 15 ದಿನಗಳೊಳಗಾಗಿ ವರದಿ ಸಲ್ಲಿಸಬೇಕು’ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ನೀಡಿದ್ದಾರೆ.
ರಕ್ಷಣಾ ಸಚಿವಾಲಯದ ಜಂಟಿ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿದ ವಿಡಿಯೊ ಸಂವಾದ ಸಭೆಯ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಕ್ಯಾಂಟೋನ್ಮೆಂಟ್ ಪ್ರದೇಶಗಳನ್ನು ಪಾಲಿಕೆಯ ವ್ಯಾಪ್ತಿಗೆ ವರ್ಗಾಯಿಸುವ ಜಿಲ್ಲಾ ಮಟ್ಟದ ಜಂಟಿ ಸಲಹಾ ಸಮಿತಿ ರಚಿಸುವಂತೆ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಿಗೆ ಕೋರಲಾಗಿದೆ. ಸಲಹಾ ಸಮಿತಿಯು ವರದಿ ಸಲ್ಲಿಸಬೇಕು. ಎ-1 ವರ್ಗದ ಜಾಗ 929.19 ಎಕರೆ ಜಾಗ, ಎಲ್.ಎಂ.ಎ. ಲೋಕಲ್ ಮಿಲಿಟರಿ ಅಥಾರಿಟಿ (ಐಒಂ) ಅವರ ನಿರ್ವಹಣೆಗೆ ಒಳಪಟ್ಟಿದೆ. ಎ-2 ವರ್ಗದ ಜಾಗ 37.94 ಎಕರೆ ಮಿಲಿಟರಿ ಮೀಸಲು ಪ್ರದೇಶ ಡಿಇಒ ಡಿಫೆನ್ಸ್ ಎಸ್ಟೇಟ್ ಆಫೀಸರ್ ನಿರ್ವಹಣೆಗೆ ಒಳಪಟ್ಟಿದೆ. ಸದರಿ ಜಾಗೆಯ ಪೈಕಿ 0.83 ಎಕರೆ ಜಾಗೆಯನ್ನು ಪಾಲಿಕೆಗೆ ಹಸ್ತಾಂತರಿಸಲು ಕರಡು ಪ್ರಸ್ತಾವ ತಯಾರಿಸಲಾಗಿದೆ. ಉಳಿದ ಜಾಗೆಯ ಸರ್ವೆ ನಂಬರ್‌ವಾರು ವಿಸ್ತೀರ್ಣ ನಮೂದಿಸಿ ಭೌತಿಕ ವಸ್ತುಸ್ಥಿತಿ ಹಾಗೂ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿರುವ ಬಗ್ಗೆ ವರದಿ ನೀಡುವಂತೆ’ ತಿಳಿಸಿದರು.