ಉಪ್ಪಿನಬೆಟಗೇರಿ: ಧಾರವಾಡ ತಾಲ್ಲೂಕಿನ ಕುರುಬಗಟ್ಟಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸುಮಾರು 3 ಸಾವಿರ ಜನಸಂಖ್ಯೆ ಇರುವ ಮುಳಮುತ್ತಲ ಗ್ರಾಮವು ಹಲವು ಮೂಲ ಸೌಕರ್ಯಗಳ ಕೊರತೆಯಿಂದ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಕುರುಬಗಟ್ಟಿಯ ಆರು, ಮಂಗಳಗಟ್ಟಿಯ ಐದು ಹಾಗೂ ಮುಳಮುತ್ತಲದ ಆರು ಗ್ರಾಮ ಪಂಚಾಯ್ತಿ ಸದಸ್ಯರು ಸೇರಿದಂತೆ ಒಟ್ಟು 17 ಸದಸ್ಯರನ್ನೊಳಗೊಂಡ ಒಂದು ಗ್ರಾಮ ಪಂಚಾಯ್ತಿ ಇದೆ.
ಮುಳಮುತ್ತಲ ಗ್ರಾಮದ ಕೆರೆಯ ಪಕ್ಕದಲ್ಲಿ ಬಸ್ ನಿಲ್ದಾಣವಿದ್ದು, ಕಟ್ಟಡದ ಹಿಂಬದಿಯ ಗೋಡೆ ಒಡೆದು ಚಾವಣಿಯ ಸಿಮೆಂಟ್ ತಗಡು ಕುಸಿದಿದೆ. ಮುಂಭಾಗದ ರಸ್ತೆ ಎತ್ತರದಲ್ಲಿದ್ದು, ಮಣ್ಣು ಮಿಶ್ರಿತ ನೀರು ಹರಿದು ಬಂದು ಒಳ ನುಗ್ಗಿ, ಕೆಸರು ಗದ್ದೆಯಂತಾಗಿದೆ. ಒಳಗಡೆ ಕುಳಿತುಕೊಳ್ಳಲು ಕಟ್ಟೆ ಕಟ್ಟಲಾಗಿದ್ದು, ಮೇಲ್ಮೈಗೆ ಹಾಕಲಾದ ಕಲ್ಲಿನ ಪರ್ಶಿ ಕಿತ್ತು, ದೂಳಿನಿಂದ ಕೂಡಿವೆ. ಈ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ನಿಲ್ಲಲು. ಕುಳಿತುಕೊಳ್ಳಲಾಗದಂತಹ ಪರಿಸ್ಥಿತಿ ಇದೆ.
ಜಿಲ್ಲಾ ಪಂಚಾಯತಿ ಅಡಿಯಲ್ಲಿ ₹ 11 ಲಕ್ಷ ವೆಚ್ಚದಲ್ಲಿ ಕಾಳಿನ (ಧಾನ್ಯ) ಗೋದಾಮು ಕಟ್ಟಡ ನಿರ್ಮಿಸಲು ಆರಂಭಿಸಲಾಗಿತ್ತು. ಈಚೆಗಿನ ಕೆಲ ವರ್ಷಗಳಿಂದ ಗೋದಾಮು ಕಟ್ಟಡ ಕೆಲಸ ಅರ್ಧಕ್ಕೆ ನಿಂತಿದ್ದು, ಅಪೂರ್ಣವಾಗಿದೆ. ಇಲ್ಲಿಯವರೆಗೆ ₹ 6.75 ಲಕ್ಷದ ಕಾಮಗಾರಿಯಷ್ಟೇ ನಡೆದಿದೆ.